Cinema News
ಬಡ್ಡೀಸ್ ಪ್ರಚಾರದ ವೇಳೆ ದುರ್ಘಟನೆ: ಅರಾಮಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ ನಟ ಕಿರಣ್ ರಾಜ್

ನಟ ಕಿರಣ್ ರಾಜ್ ನಟನೆಯ ಬಡ್ಡೀಸ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಈ ವೇಳೆ ದುರಂತವೊಂದು ಸಂಭವಿಸಿದೆ. ಬಡ್ಡೀಸ್ ಸಿನಿಮಾ ಪ್ರಚಾರದ ವಾಹನ ಜಖಂ ಆಗಿದ್ದು ಕೆಲವೇ ಗಂಟೆಗಳ ಅಂತರದಿಂದ ನಟ ಕಿರಣ್ ರಾಜ್ ಹಾಗೂ ಚಿತ್ರತಂಡ ಬಚಾವ್ ಆಗಿದೆ.
ಕನ್ನಡ ಕಿರುತೆರೆ ಲೋಕದಲ್ಲಿ ಚಿರಪರಿಚಿತರಾಗಿರುವ ನಟ ಕಿರಣ್ ರಾಜ್ ನಟನೆಯ ಬಡ್ಡೀಸ್ ಸಿನಿಮಾ ಇದೇ ಜೂನ್ 24ರಂದು ರಿಲೀಸ್ ಆಗ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಅಂತೆಯೇ ಬೆಳಗಾವಿಯ ಕಾಲೇಜ್ವೊಂದರಲ್ಲಿ ಭೇಟಿ ನೀಡುವ ವೇಳೆ ಪ್ರಚಾರಕ್ಕಾಗಿ ರೆಡಿ ಮಾಡಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಸಿನಿಮಾ ಪ್ರಚಾರಕ್ಕೆ ಹೋಗುವಾಗ ಸಿನಿಮಾದ ಪ್ರಚಾರ ವಾಹನ ಜಖಂ ಆಗಿದ್ದು, ಸಿನಿಮಾ ತಂಡದ ಯಾರಿಗೂ ಏನೂ ಆಗಿಲ್ಲ ಎಂದು ಕಿರಣ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಿರಣ್ ರಾಜ್ ಅವರು ಪ್ರಚಾರಕ್ಕೆಂದೇ ಸಿದ್ಧಗೊಳಿಸಿರುವ ವಾಹನದಲ್ಲಿ ಸುಮಾರು ಕಾಲ ಟ್ರಾವೆಲ್ ಮಾಡಿದ್ದರು. ಬೆಳಗಾವಿಯಲ್ಲಿ ಒಂದು ಕಾಲೇಜ್ಗೆ ಭೇಟಿ ನೀಡಿದ ನಂತರ ಇನ್ನೊಂದು ಕಾಲೇಜಿಗೆ ಭೇಟಿ ಕೊಡಬೇಕಿತ್ತು. ಹೀಗಾಗಿ ಆ ಪ್ರಚಾರದ ವಾಹನ ಮೊದಲಿಗೆ ಹೋಯಿತು. ಆಗ ಕಿರಣ್ ರಾಜ್ ಅವರು ಪ್ರಚಾರದ ವಾಹನದಿಂದ ಇಳಿದು ಕಾರ್ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ಪ್ರಚಾರದ ವಾಹನದವರು ಟೀ ಕುಡಿಯಲು ವಾಹನವನ್ನು ನಿಲ್ಲಿಸಿ ಹೊರ ಬಂದಿದ್ದ ವೇಳೆ ಕಂಬ ಬಿದ್ದಿದೆ. ವಾಹನದ ಮುಂಭಾಗ ಫುಲ್ ಜಖಂ ಆಗಿದ್ದು, ಕಂಬ ಬೀಳುವ ವೇಳೆ ವಾಹನದ ಒಳಗಡೆ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಆಗಿಲ್ಲ. ವಾಹನಕ್ಕೆ ಅಪಾಯ ಆಗುವ ಅರ್ಧ ಗಂಟೆ ಮುಂಚೆ ನಾನು ಅದರಿಂದ ಇಳಿದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
