Cinema News
100ರ ಸಂಭ್ರಮದಲ್ಲಿ ವರ್ಷದ ಮೊದಲ ಸೂಪರ್ ಹಿಟ್ ಚಿತ್ರ “ಬೆಲ್ ಬಾಟಮ್”

ರಿಷಭ್ ಶೆಟ್ಟಿ,ಹರಿಪ್ರಿಯಾ ನಟನೆಯ ಬೆಲ್ ಬಾಟಮ್ ಸಿನಿಮಾ 2019ರ ಮೊದಲ ಸೂಪರ್ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ.
ಕಳೆದ ಶುಕ್ರವಾರಕ್ಕೆ ಚಿತ್ರ ಬಿಡುಗಡೆಯಾಗಿ ನೂರು ದಿನಗಳಾಗಿದ್ದು, ಇದೇ ಸಮಯದಲ್ಲಿ ಬೆಂಗಳೂರಿನ ವಿರೇಶ್ ಚಿತ್ರಮಂದಿರದ ಬಳಿ ಬೆಲ್‌ಬಾಟಮ್ ಚಿತ್ರತಂಡ ನೂರು ದಿನಗಳ ಸಂಭ್ರಮಾಚರಣೆ ಆಚರಿಸಿದೆ.ಟಿ ಕೆ ದಯಾನಂದ್ ಬರೆದ ಕಥೆಗೆ ಜಯತೀರ್ಥ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿನ ರೆಟ್ರೋ ಸ್ಟೈಲ್ ಮತ್ತು ವಿಶಿಷ್ಟ ಕಥೆಯೇ ಈ ಸಿನಿಮಾದ ಗೆಲುವಿಗೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕ ಸಂತೋಷ್.

ರಿಷಭ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್‌ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸಿದ್ದರು. 2019ರಲ್ಲಿ ಬಿಡುಗಡೆಯಾದ ಸುಮಾರು 84 ಚಿತ್ರಗಳಲ್ಲಿ ನೂರು ದಿನ ಯಶಸ್ವಿ ಪ್ರದರ್ಶನ ಕಂಡ ಏಕೈಕ ಚಿತ್ರ ಬೆಲ್‌ಬಾಟಮ್.
ಬೆಂಗಳೂರು,ಮೈಸೂರು,ದಾವಣಗೆರೆ ಸೇರಿದಂತೆ ಕರ್ನಾಟದದ್ಯಾಂತ ಸುಮಾರು 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ನೂರು ದಿನಗಳ ಪ್ರದರ್ಶನ ಕಂಡಿದೆ. 15ನೇ ವಾರದಲ್ಲೂ ಚಿತ್ರ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

‘ನನಗೆ ದಯಾನಂದ್ ಅವರು ಕಥೆ ಹೇಳಿದಾಗ, ಈ ಕಥೆಯನ್ನು ವಿಶಿಷ್ಟವಾಗಿ ಜನರಿಗೆ ತಲುಪಿಸಬೇಕು ಎಂದು ಅನಿಸಿತ್ತು. ಅದರಂತೆ ನಿರ್ದೇಶಕರು, ನಾಯಕ ರಿಷಭ್, ಪ್ರಮೋದ್ ಶೆಟ್ಟಿ ಎಲ್ಲರೂ ಕುಳಿತು ಪ್ಲಾನ್ ಮಾಡಿ ಇದನ್ನು ರೆಟ್ರೋ ಶೈಲಿಯಲ್ಲಿ ಮಾಡಬೇಕು ಎಂದು ತೀರ್ಮಾನಿಸಿದೆವು. ನನ್ನ ಪ್ರಕಾರ ಈ ಕಥೆಯನ್ನು ರೆಟ್ರೋ ಶೈಲಿಯಲ್ಲಿ ಮಾಡದೇ ಹೋಗಿದ್ದಲ್ಲಿ, ಚಿತ್ರ ಇಷ್ಟರ ಮಟ್ಟಿಗೆ ಗೆಲುವು ಸಾಧಿಸುತ್ತಿರಲಿಲ್ಲ. ಈ ಗೆಲುವನ್ನು ನಾನು ನನ್ನ ಕುಟುಂಬ ಮತ್ತು ನನ್ನ ಸಿನಿಮಾ ತಂಡಕ್ಕೆ ಸಲ್ಲಿಸುತ್ತೇನೆ’ಎನ್ನುತ್ತಾರೆ ಸಂತೋಷ್.

