Cinema News
ಆಲಿಯಾ ಗರ್ಭಿಣಿ ಸುದ್ದಿ: ವರದಿಯೊಂದರ ಮೇಲೆ ಗುಡುಗಿದ ಬಿಟೌನ್ ಬ್ಯೂಟಿ

ಬಾಲಿವುಡ್ ನಟಿ ಆಲಿಯಾ ಭಟ್ ಗರ್ಭಿಣಿಯಾಗಿರುವ ಸುದ್ದಿ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ. ತಾವು ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಆಲಿಯಾ ಭಟ್ ಶೇರ್ ಮಾಡುತ್ತಿದ್ದಂತೆಯೇ ದಂಪತಿಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಈ ಮಧ್ಯೆ ಆಲಿಯಾ ಭಟ್ ಶೂಟಿಂಗ್ ಶೆಡ್ಯೂಲ್ ಬಗ್ಗೆ ವರದಿಗಳು ಹೊರಬಿದ್ವು. ಅಂತಹ ವರದಿಗಳಲ್ಲಿ ಒಂದು ವರದಿಯ ವಿರುದ್ಧ ಆಲಿಯಾ ಗರಂ ಆಗಿದ್ದಾರೆ.
‘’ಸೋಮವಾರ ಬೆಳಗ್ಗೆ ಆಲಿಯಾ ಭಟ್ ತಾವು ಗರ್ಭಿಣಿಯಾಗಿರುವುದನ್ನು ಘೋಷಿಸಿದರು. ಜುಲೈ ಮಧ್ಯ ಭಾಗದಲ್ಲಿ ಯುಕೆ ಇಂದ ಮುಂಬೈಗೆ ಆಲಿಯಾ ಭಟ್ ವಾಪಸ್ ಆಗಲಿದ್ದಾರೆ. ಯುಕೆಗೆ ಹೋಗಿ ತಮ್ಮ ಪತ್ನಿಯನ್ನ ರಣ್ಬೀರ್ ಕಪೂರ್ ವಾಪಸ್ ಮುಂಬೈಗೆ ಕರೆತರಲಿದ್ದಾರೆ. ಶೂಟಿಂಗ್ನಿಂದ ವಾಪಸ್ ಬಂದ ನಂತರ ಆಲಿಯಾ ಭಟ್ ವಿಶ್ರಾಂತಿ ಪಡೆಯಲಿದ್ದಾರೆ. ತಮ್ಮ ಸಿನಿಮಾ ಕಮಿಟ್ಮೆಂಟ್ಗಳಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಪ್ರೆಗ್ನೆನ್ಸಿಯನ್ನ ಆಲಿಯಾ ಭಟ್ ಪ್ಲಾನ್ ಮಾಡಿದ್ದಾರೆ. ಜುಲೈ ತಿಂಗಳೊಳಗೆ ‘ಹಾರ್ಟ್ ಆಫ್ ಸ್ಟೋನ್’ ಮತ್ತು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಶೂಟಿಂಗ್ ಅನ್ನು ಆಲಿಯಾ ಭಟ್ ಕಂಪ್ಲೀಟ್ ಮಾಡಲಿದ್ದಾರೆ’’ ಎಂದು ವರದಿಯಾಗಿತ್ತು. ಇದೇ ವರದಿಯನ್ನು ಉಲ್ಲೇಖಿಸಿ ಆಲಿಯಾ ಭಟ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ವರದಿಯಿಂದ ಆಕ್ರೋಶಗೊಂಡ ಆಲಿಯಾ, ‘’ನಾವಿನ್ನೂ ಪಿತೃಪ್ರಧಾನ ಜಗತ್ತಿನಲ್ಲಿ ಬದುಕುತಿದ್ದೇವೆ ಎಂದು ಕೆಲವರು ಭಾವಿಸಿದ್ದಾರೆ. ನಿಮ್ಮೆಲ್ಲರ ಮಾಹಿತಿಗಾಗಿ ಹೇಳುತ್ತಿದ್ದೇನೆ..ಯಾವುದೂ ಕೂಡ ತಡವಾಗಿಲ್ಲ. ಯಾರು ಯಾರನ್ನೂ ‘ಪಿಕ್’ ಮಾಡುವ ಅವಶ್ಯಕತೆ ಇಲ್ಲ. ನಾನು ಮಹಿಳೆ, ಪಾರ್ಸಲ್ ಅಲ್ಲ. ನಾನು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ. ನಿಮ್ಮ ಬಳಿ ಡಾಕ್ಟರ್ ಸರ್ಟಿಫಿಕೇಷನ್ ಇದೆ ಅಂತ ಗೊತ್ತಾಗಿದ್ದು ಒಳ್ಳೆಯದಾಯಿತು. ಇದು 2022. ದಯವಿಟ್ಟು ನಾವು ಈ ಪುರಾತನವಾದ ಪಿತೃಪ್ರಧಾನ ಆಲೋಚನೆಯಿಂದ ಹೊರಬರಬಹುದೇ? ಈಗ ನೀವು ನನ್ನನ್ನು ಕ್ಷಮಿಸಿದರೆ ನನ್ನ ಶಾಟ್ ಸಿದ್ಧವಾಗಿದೆ’’ ಎಂದು ವ್ಯಂಗ್ಯವಾಗಿ ಇನ್ಸ್ಟಾಗ್ರಾಮ್ನಲ್ಲಿ ಆಲಿಯಾ ಭಟ್ ಬರೆದುಕೊಂಡಿದ್ದಾರೆ.
‘’ಎಲ್ಲರ ಪ್ರೀತಿ ಹಾಗೂ ಆಶೀರ್ವಾದವನ್ನು ಕಂಡ ನನಗೆ ಸಂತೋಷವಾಗಿದೆ. ಪ್ರತಿಯೊಬ್ಬರ ಮೆಸೇಜ್ ಹಾಗೂ ಶುಭ ಹಾರೈಕೆಗಳನ್ನು ಓದಲು ಪ್ರಯತ್ನಿಸಿದೆ. ನನ್ನ ಜೀವನದ ಇಂತಹ ಅದ್ಭುತ ಕ್ಷಣವನ್ನು ನಿಮ್ಮೆಲ್ಲರ ಪ್ರೀತಿಯೊಂದಿಗೆ ಸೆಲೆಬ್ರೇಟ್ ಮಾಡಿದ್ದು ಖುಷಿ ತಂದಿದೆ. ಪ್ರತಿಯೊಬ್ಬರಿಗೂ ಥ್ಯಾಂಕ್ಯು’’ ಎಂದಿದ್ದಾರೆ.
