Cinema News
ಪ್ರಧಾನಿ ಮೋದಿಗೆ ಕನ್ನಡ ಸಿನಿಮಾದ ಟ್ರೈಲರ್ ನೋಡಿ ಎಂದ ನಟಿ ರಮ್ಯಾ

ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿದು ವಾಪಸ್ ಆಗಿದ್ದಾರೆ. ಈ ಮಧ್ಯೆ ಮೋದಿ ಆಗಮನದ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯೆಯಾಗಿದ್ದ ನಟಿ ರಮ್ಯಾ ಮೊದಲಿನಿಂದಲೂ ಬಿಜೆಪಿ ಹಾಗೂ ಮೋದಿಯವರನ್ನು ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಮೋದಿ ಆಗಮನದ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಮೋದಿಗೆ ವ್ಯಂಗ್ಯವಾಗಿ ಸ್ವಾಗತ ಕೋರಿರುವ ಜೊತೆಗೆ ಕನ್ನಡ ಸಿನಿಮಾ ಒಂದರ ಟ್ರೈಲರ್ ನೋಡುವಂತೆ ಸಲಹೆ ನೀಡಿದ್ದಾರೆ.
”ನಮ್ಮ ಮೈಸೂರಿಗೆ ಸ್ವಾಗತ ಮೋದಿ ಅವರೇ, ನಿಮಗೆ ಸಮಯ ಸಿಕ್ಕರೆ ಮೈಸೂರಿನಲ್ಲಿ ನೀವು ಮಾಡಬೇಕಾದ ಕೆಲಸಗಳ ಪಟ್ಟಿ ಇಲ್ಲಿದೆ. ಮೊದಲನೇಯದಾಗಿ ನೀವು ರಸ್ತೆಯ ಉದ್ಘಾಟನೆ ಮಾಡಬೇಕಿದೆ. ರಸ್ತೆಗಳು ನಮಗೆ ಅತ್ಯಂತ ಅವಶ್ಯಕವಾಗಿದೆ” ಎಂದಿರುವ ರಮ್ಯಾ, ರಸ್ತೆ ಮಂಜೂರು ಮಾಡಿದ್ದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಕಾರ್ಯ ಬಹು ದಿನದಿಂದ ನಡೆಯುತ್ತಿದ್ದು ರಸ್ತೆ ಉದ್ಘಾಟನೆ ಮಾಡಬೇಕೆಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಎರಡನೇಯದಾಗಿ ಮೈಸೂರಿನಲ್ಲಿ ಬಹಳ ಫೇಮಸ್ ಆಗಿರುವ ಮೈಲಾರಿ ಬೆಣ್ಣೆ ದೋಸೆ ಸವಿಯಿರಿ. ನೀವು ಈವರೆಗೆ ಸವಿಯದಿರುವಂತಹಾ ಮೆತ್ತನೆಯ ದೋಸೆ ಅದಾಗಿದೆ ಎಂದಿದ್ದಾರೆ ರಮ್ಯಾ. ಮೂರನೇಯದಾಗಿ, ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಕ ಬಗ್ಗೆ ತಿಳಿದುಕೊಳ್ಳಿ, ಅದು ಸಾಧ್ಯವಾಗದೇ ಹೋದರೆ ಮೈಸೂರಿನ ಯುವ ಪ್ರತಿಭಾವಂತರು ನಿರ್ಮಿಸಿರುವ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾದ ಟ್ರೈಲರ್ ಅನ್ನು ಒಮ್ಮೆ ನೋಡಿ ಎಂದು ಸಲಹೆ ನೀಡಿದ್ದಾರೆ.
‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾವನ್ನು ಯುವ ಪ್ರತಿಭಾವಂತರೆ ಸೇರಿ ನಿರ್ಮಿಸಿದ್ದಾರೆ. ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಮೈಸೂರು ಪೂರ್ಣ ಈ ಸಿನಿಮಾದ ನಾಯಕ. ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂದು ಕನಸು ಕಟ್ಟಿಕೊಂಡಿರುವ ಯುವಕನೊಬ್ಬನ ಕತೆಯನ್ನು ಈ ಸಿನಿಮಾ ತೋರಿಸಲಾಗಿದೆ. ಆರ್ಕೆಸ್ಟ್ರಾದಲ್ಲಿ ಹಾಡುವ ಕನಸು ಕಟ್ಟಿಕೊಂಡಿರುವ ಯುವಕ ಅವಮಾನ ಅನುಭವಿಸಿ ಕೊನೆಗೆ ತಾನೇ ಹೇಗೆ ಆರ್ಕೆಸ್ಟ್ರಾ ಕಟ್ಟುತ್ತಾನೆ ಎಂಬುದೇ ಕತೆ ಆರ್ಕೇಸ್ಟ್ರಾ ಮೈಸೂರು ಸಿನಿಮಾದಲ್ಲಿ.
