Television News
ಪಿಕೆ ಸಿನಿಮಾದ ದೃಶ್ಯ ಹಂಚಿಕೊಂಡು ಹಿಂದೂ ಆಗಿರುವುದಕ್ಕೆ ಹೆಮ್ಮೆ ಎಂದ ನಟಿ ಕಂಗಾನ

ಪ್ರವಾದಿ ಮೊಹಮ್ಮದ್ರ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಸಾಕಷ್ಟು ಮಂದಿ ತಮ್ಮದೇ ಆದ ಪ್ರತಿಕ್ರಿಯೆಗಳನ್ನ ನೀಡ್ತಿದ್ದಾರೆ. ಈ ಮಧ್ಯೆ ನಟಿ ಕಂಗನಾ ರಣಾವತ್ ಅಮೀರ್ ಖಾನ್ ನಟನೆಯ ಪಿಕೆ ಸಿನಿಮಾದ ದೃಶ್ಯದ ಉದಾಹರಣೆ ನೀಡಿ ಹೇಳಿಕೆಯೊಂದನ್ನ ನೀಡಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಶಿವನ ವೇಷದಲ್ಲಿರುವ ಕಲಾವಿದ ವಾಶ್ ರೂಂನಲ್ಲಿ ಇರುವ ‘ಪಿಕೆ’ ಸಿನಿಮಾದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇತುಹಾಕಿರುವ ಚಿತ್ರವನ್ನು ಅದರ ಜೊತೆಗೆ ಶೇರ್ ಮಾಡಿದ್ದಾರೆ.
ಅಮೀರ್ ಖಾನ್ ನಟಿಸಿರುವ ‘ಪಿಕೆ’ ಸಿನಿಮಾದಲ್ಲಿ ಶಿವ ವೇಷಧಾರಿಯನ್ನು ಅಮೀರ್ ಖಾನ್ ಅಟ್ಟಾಡಿಸಿಕೊಂಡು ಹೋಗುವ ತಮಾಷೆಯ ದೃಶ್ಯವೊಂದಿದೆ. ಸಿನಿಮಾ ಬಿಡುಗಡೆ ಆದಾಗ ಆ ದೃಶ್ಯದ ಬಗ್ಗೆ ಆಗಲೂ ಹಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈಗ ಅದೇ ದೃಶ್ಯದ ಚಿತ್ರವೊಂದನ್ನು ಕಂಗನಾ ಹಂಚಿಕೊಂಡಿದ್ದು ಹಿಂದೂ ಆಗಿರುವುದಕ್ಕೆ ಹೆಮ್ಮೆ ಎಂದಿದ್ದಾರೆ.
ನಾನು ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡಲು ಇದೇ ಕಾರಣ, ಇಂತಹ ಮೂರ್ಖತನದ (ಪಿಕೆ ಸಿನಿಮಾದ ದೃಶ್ಯ ಉಲ್ಲೇಖಿಸಿ) ನಂತರವೂ ನನ್ನ ಶಿವಂ ಅಸಮಾಧಾನಗೊಳ್ಳಲಿಲ್ಲ. ಇದು ನನ್ನ ಆಧ್ಯಾತ್ಮಿಕತೆ ಮತ್ತು ನಂಬಿಕೆಗೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ‘ಹಿಂದೂ ಆಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಬರೆದುಕೊಂಡಿದ್ದಾರೆ.
ನೂಪುರ್ ಶರ್ಮಾ ಅವರ ಪ್ರತಿಕೃತಿ ನೇತಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಕಂಗನಾ, ‘ಈ ಭಯಾನಕ ಚಿತ್ರ ಅಫ್ಘಾನಿಸ್ತಾನದಿಂದ ಬಂದಿದ್ದಲ್ಲ. ಬದಲಾಗಿ ಭಾರತದ ‘ಶಾಂತಿಪ್ರಿಯ’ ಜನರು ನೂಪುರ್ ಅವರ ಪ್ರತಿಮೆಯನ್ನು ನೇತು ಹಾಕಿರುವ ದೃಶ್ಯ ಎಂದು ಬರೆದುಕೊಂಡಿದ್ದಾರೆ.
