Television News
ಡಾಲಿ ಪಿಕ್ಚರ್ಸ್ನಿಂದ ಜೀ5ನಲ್ಲಿ ಹೊಸ ಕಾಮಿಡಿ ಥ್ರಿಲ್ಲರ್ “ಜೆರಾಕ್ಸ್”

“ಜೆರಾಕ್ಸ್” ಎಂಬ ಹೊಸ ಫ್ಯಾಂಟಸಿ-ಡಾರ್ಕ್ ಕಾಮಿಡಿ ಥ್ರಿಲ್ಲರ್ ವೆಬ್ ಸರಣಿಯನ್ನು ನಟ ಡಾಲಿ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಘೋಷಿಸಿದ್ದಾರೆ. ಇದು ಅವರ ಮೊದಲ ಓಟಿಟಿ ನಿರ್ಮಾಣವಾಗಿದ್ದು, ZEE5 ಜೊತೆಗಿನ ಸಹಯೋಗದಲ್ಲಿ ಮೂಡಿ ಬರುತ್ತಿದೆ. ‘ಬ್ಲಿಂಕ್’ ಚಿತ್ರದ ಖ್ಯಾತ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸರಣಿಯನ್ನು ನಿರ್ದೇಶಿಸಲಿದ್ದು, ಇದು ಅವರ ಮೊದಲ ವೆಬ್ ಸರಣಿಯಾಗಿದೆ.
ಕನ್ನಡ ಮಣ್ಣಿನ ಕಥೆಗಳನ್ನು ಉತ್ತೇಜಿಸುವಲ್ಲಿ ಹೆಸರಾದ ಜೀ5, “ಜೆರಾಕ್ಸ್” ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪ್ರಯತ್ನವೂ ಗಮನಾರ್ಹವಾಗಿದೆ. ಶ್ರೀನಿಧಿ ಬೆಂಗಳೂರು ಮತ್ತು ಡಾಲಿ ಧನಂಜಯ ಅವರ ಜೋಡಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.

ಡಾಲಿ ಧನಂಜಯ ಮಾತನಾಡಿ, ಓಟಿಟಿ ಕ್ಷೇತ್ರದಲ್ಲಿ ನಿರ್ಮಾಣ ಮಾಡಲು ಬಹುಕಾಲದಿಂದ ಆಸೆ ಇತ್ತು, ಸರಿಯಾದ ಕಥೆ ಮತ್ತು ವೇದಿಕೆಗಾಗಿ ಕಾಯುತ್ತಿದ್ದೆ ಎಂದರು. “ಜೆರಾಕ್ಸ್” ಆ ಅವಕಾಶವನ್ನು ನೀಡಿದ್ದು, ಜೀ5 ಜೊತೆ ಕೆಲಸ ಮಾಡುವುದಕ್ಕೆ ಸಂತೋಷವಾಗಿದೆ. ನಮ್ಮ ಮಣ್ಣಿನ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ನನ್ನ ಆಶಯ ಎಂದು ಹೇಳಿದರು.
ನಿರ್ದೇಶಕ ಶ್ರೀನಿಧಿ ಬೆಂಗಳೂರು, ಡಾರ್ಕ್ ಕಾಮಿಡಿ, ಥ್ರಿಲ್ಲರ್ ಮತ್ತು ಫ್ಯಾಂಟಸಿ ಅಂಶಗಳ ಸಂಯೋಜನೆಯೊಂದಿಗೆ ಪ್ರಯೋಗ ಮಾಡಲು ಈ ಸರಣಿ ಉತ್ತಮ ಅವಕಾಶ ಎಂದು ಹೇಳಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡುವ ವೇದಿಕೆಯಲ್ಲಿ ಈ ಕಥೆಯನ್ನು ಹೇಳಲು ಉತ್ಸಾಹವಿದೆ ಎಂದರು.

