Cinema News
ಇದುವರೆಗೂ ಮಾಡಿರದ ಪಾತ್ರದಲ್ಲಿ ಭಾವನಾ; ‘ಸ್ಪಾರ್ಕ್’ನಲ್ಲಿ ಲಾಯರ್ ಅವತಾರ!

‘ಸ್ಪಾರ್ಕ್’ ಸಿನಿಮಾ ದಿನಕ್ಕೊಂದು ಹೊಸ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡುಗಳನ್ನು ಪರಿಚಯಿಸಿದ್ದ ಚಿತ್ರತಂಡ ಇದೀಗ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಭಾವನಾ ಅವರನ್ನು ಸುದ್ದಿಗೋಷ್ಠಿಗೆ ಕರೆತಂದು ಅವರ ಪಾತ್ರದ ಕುರಿತಾದ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಚಿತ್ರದಲ್ಲಿ ಭಾವನಾ ಅವರು ‘ವೈದೇಹಿ’ ಎಂಬ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಸ್ಪಾರ್ಕ್’ ಎನ್ನುವ ಶೀರ್ಷಿಕೆಯಲ್ಲಿರುವ ಉತ್ಸಾಹವೇ ಸಿನಿಮಾದ ಕಥೆ ಮತ್ತು ಪ್ರತಿಯೊಂದು ಪಾತ್ರದಲ್ಲೂ ಇದೆ ಎಂದು ಭಾವನಾ ಹೇಳಿದರು. ವಿಭಿನ್ನ ಹಾಗೂ ಸವಾಲಿನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ತಾವು, ನಿರ್ದೇಶಕರು ಪಾತ್ರದ ಬಗ್ಗೆ ವಿವರಿಸಿದಾಗ ಇದುವರೆಗೂ ತಾನು ಮಾಡಿರದಂತಹ ಪಾತ್ರ ಇದಾಗಿದೆ ಎನ್ನುವುದು ತಿಳಿಯಿತು. ಬಹಳ ಸಮಯದ ನಂತರ ನಟಿಯಾಗಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ತೋರಿಸಲು ಅವಕಾಶ ನೀಡುವ ಪಾತ್ರ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ನಿರ್ಮಾಪಕಿ ಪ್ರತಿದಿನವೂ ಸೆಟ್‌ಗೆ ಆಗಮಿಸಿ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಕೂಡ ಅವರು ಮೆಚ್ಚಿಕೊಂಡರು.

ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಅವರ ಪ್ರತಿಭೆಯನ್ನು ಭಾವನಾ ವಿಶೇಷವಾಗಿ ಪ್ರಶಂಸಿಸಿದರು. ಕೇವಲ ಚೆನ್ನಾಗಿ ಕಾಣುವುದಷ್ಟೇ ಅಲ್ಲದೆ, ನಟನೆಯ ಜೊತೆಗೆ ಡ್ಯಾನ್ಸ್ ಮತ್ತು ಫೈಟ್‌ನಲ್ಲೂ ತಮ್ಮ ಸಾಮರ್ಥ್ಯ ತೋರಬಲ್ಲ ಬಹುಮುಖ ಪ್ರತಿಭೆ ನಿರಂಜನ್ ಎಂದು ಅವರು ಹೇಳಿದರು. ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಯುವ ನಟನಾಗಿ ನಿರಂಜನ್ ಬೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಭಾವನಾ, ‘ಸ್ಪಾರ್ಕ್’ನಲ್ಲಿ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರ ತಂಡವಿದೆ ಎಂದರು. ಕೌಟುಂಬಿಕ ಅಂಶ, ಉತ್ತಮ ಸಂದೇಶ ಮತ್ತು ಮನರಂಜನೆಯನ್ನು ಒಳಗೊಂಡಿರುವ ಸಂಪೂರ್ಣ ಪ್ಯಾಕೇಜ್ ಸಿನಿಮಾ ಇದಾಗಿದೆ ಎಂಬ ವಿಶ್ವಾಸವನ್ನೂ ಹಂಚಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ, ವಿಜಯ್ ಚೆಂಡೂರ್, ಅಶ್ವಥ್ ನೀನಾಸಂ, ಮಹಾಂತೇಶ್ ಹಿರೇಮಠ ಹಾಗೂ ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಮಾತನಾಡಿದರು. ಭಾವನಾ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಕಲಾವಿದರು ಹಂಚಿಕೊಂಡರು. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ಪ್ರತಿಯೊಂದು ಪಾತ್ರಕ್ಕೂ ಸೂಕ್ತವಾದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಕರ್ತನಾಗಿ ಕಾಣಿಸಿಕೊಳ್ಳುವ ನಾಯಕನಿಗೆ ಒಂದು ಪ್ರಮುಖ ಘಟನೆಯಲ್ಲಿ ಸಹಾಯವಾಗಿ ಬರುವ ವೈದೇಹಿ ಎಂಬ ಲಾಯರ್ ಪಾತ್ರವನ್ನು ಭಾವನಾ ನಿರ್ವಹಿಸಿದ್ದಾರೆ ಎಂದರು. ರಚನಾ ಇಂದರ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 25ರಂದು ‘ಸ್ಪಾರ್ಕ್’ ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ಚಿತ್ರತಂಡ ಒಂದೊಂದೇ ವಿಶೇಷತೆಯನ್ನು ಅನಾವರಣಗೊಳಿಸುವ ಮೂಲಕ ನಿರೀಕ್ಷೆ ಹೆಚ್ಚಿಸುತ್ತಿದೆ.
