Cinema News
ತಮಿಳು ನಟ ಆರ್ಯಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ: ಇಡೀ ಇಂಡಸ್ಟ್ರಿ ಬಳಿ ಇರುವ ಎನರ್ಜಿ ಪುನೀತ್ ಬಳಿ ಇತ್ತು ಎಂದ ನಟ

ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಎಂಟು ತಿಂಗಳು ಕಳೆದಿದ್ದು ಇಂದಿಗೂ ಅಪ್ಪು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ. ಸಿನಿಮಾ ಹಾಗೂ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಅಪ್ಪು ಪ್ರತಿಯೊಬ್ಬರ ಮನಸ್ಸಿನಲ್ಲು ಹಚ್ಚ ಹಸಿರಾಗಿದ್ದಾರೆ.
ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಪುನೀತ್ ಅವರ ಕನಸನ್ನು ಈಡೇರಿಸುತ್ತಿದ್ದಾರೆ. ಇತ್ತೀಚೆಗೆ ತಮಿಳಿನ ಖಾಸಗಿ ಮಾಧ್ಯಮವೊಂದು ತಮಿಳು ನಟರಿಗೆ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೋಗಿದ್ದರು.
ಈ ವೇಳೆ ತಮಿಳು ನಟ ಆರ್ಯಗೆ ಡಾ. ಪುನೀತ್ರಾಜ್ಕುಮಾರ್ ಅವಾರ್ಡ್ ಅನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಹಸ್ತಾಂತರಿಸಿದರು. ಈ ವೇಳೆ ಆರ್ಯ ವೇದಿಕೆ ಮೇಲೆ ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಅಶ್ವಿನಿ ಕುರಿತಾಗಿ ಮೆಚ್ಚುಗೆ ಮಾತುಗಳನ್ನಾಡಿದರು.
“ಅಪ್ಪು ಸರ್ ಅವರದ್ದು ಪದಗಳಿಗೂ ಮೀರಿದ ವ್ಯಕ್ತಿತ್ವ. ಈ ಅವಾರ್ಡ್ ಬಂದಿರುವುದು ಖುಷಿ ಕೊಟ್ಟಿದೆ. ಅಪ್ಪು ಸರ್ ಬಗ್ಗೆ ಹೇಳಬೇಕು ಅಂದರೆ, ನಾನು ಅಪ್ಪು ಅವರ 5 ಪರ್ಸೆಂಟ್ನಷ್ಟೂ ಇಲ್ಲ. ಅವರ ಡ್ಯಾನ್ಸ್, ಫೈಟ್, ಆಕ್ಟಿಂಗ್, ಜಿಮ್ನಾಸ್ಟಿಕ್, ಇಡೀ ಇಂಡಸ್ಟ್ರಿ ಬಳಿ ಇರುವ ಎನರ್ಜಿ ಅವರ ಬಳಿ ಇತ್ತು. ಈ ಅವಾರ್ಡ್ ಇಡೀ ಇಂಡಸ್ಟ್ರಿಗೆ ಸೇರಬೇಕು. ಅಶ್ವಿನಿ ಮೇಡಂ ಅವಾರ್ಡ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಮೊದಲಿಗೆ ನಾನು ಅಶ್ವಿನಿ ಮೇಡಂಗೆ ಥ್ಯಾಂಕ್ಸ್ ಹೇಳುತ್ತೇನೆ. ನನಗೆ ತಿಳಿದ ಹಾಗೆ ಆಶ್ವಿನಿ ಮೇಡಂ ಅವರ ತುಂಬಾ ಸ್ಟ್ರಾಂಗ್ ಹಾಗೂ ಧೈರ್ಯ ಇರುವ ಮಹಿಳೆ.” ಎಂದು ಆರ್ಯ ಹೇಳಿದ್ದಾರೆ.
ತಮಿಳಿನ ಖಾಸಗಿ ಮಾಧ್ಯಮ ತಮಿಳು ನಟರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಡಾ. ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿದ್ದು ಕನ್ನಡಿಗರಿಗೆ ಖುಷಿಯನ್ನು ಇಮ್ಮಡಿಗೊಳಿಸಿದೆ.
