Cinema News
ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕರ ಕಾರು ಅಪಘಾತ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ. ಇದೀಗ ಸೂರಪ್ಪ ಬಾಬು ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು ಅಭಿಮಾನಿಗಳು ಕೆಲ ಕಾಲ ಆತಂಕಕ್ಕೆ ಈಡಾಗಿದ್ದರು.
ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ಸೂರಪ್ಪ ಬಾಬು ಕಾರು ಅಪಘಾತಕ್ಕೆ ಈಡಾಗಿದೆ. ಹೊಸೂರಿನಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆ ಆಗಿಲ್ಲ, ಎಲ್ಲರು ಸುರಕ್ಷಿತವಾಗಿದ್ದೇವೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.
ಭಾನುವಾರ ಸೂರಪ್ಪ ಬಾಬು ಕುಟುಂಬಸ್ಥರು ತಮಿಳುನಾಡಿನಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದರು. ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಹೊಸೂರಿನ ಬಳಿ ಅಪಘಾತ ಸಂಭವಿಸಿದೆ. ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಕಾರಿನ ಮುಂಭಾಗ ಸೂರಪ್ಪ ಬಾಬು ಅವರು ಕುಳಿತಿದ್ದು ಈ ವೇಳೆ ಅವರ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಘಟನೆ ಕುರಿತು ಮಾತನಾಡಿದ ಸೂರಪ್ಪ ಬಾಬು ನಾವು ಏಳು ಜನರು ಇನ್ನೋವಾ ಕಾರಿನಲ್ಲಿ ದೇವಸ್ಥಾನಕ್ಕೆಂದು ಹೊರಟ್ಟಿದ್ದೆವು. ಆದರೆ ರಸ್ತೆ ಮಧ್ಯೆ ಅಪಘಾತ ಸಂಭವಿಸಿದೆ. ನನಗೆ ಇದೇ ಮೊದಲು ಈ ರೀತಿಯ ಅವಘಡ ಸಂಭವಿಸಿದೆ. ಈ ವೇಳೆ ನನ್ನನ್ನು ಅನೇಕರು ಗುರುತಿಸಿ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಿದರು.
ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಅದಕ್ಕೆ ನನಗೆ ತೀವ್ರ ಕಾಲು ನೋವು ಕಾಣಿಸಿಕೊಂಡಿತು. ಹೀಗಾಗಿ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಪ್ರಸ್ತುತ ನನ್ನ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಈಗ ಆರಾಮಾಗಿದ್ದೇನೆ. ಸ್ವಲ್ಪ ದಿನ ರೆಸ್ಟ್ ಮಾಡಿ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಘಟನೆಯ ಕುರಿತು ಸೂರಪ್ಪ ಬಾಬು ವಿವರಿಸಿದ್ದಾರೆ.
