Cinema News
ಕನ್ನಡದ ಮೀರಾಬಾಯಿ ಹರಪನಹಳ್ಳಿ ಭೀಮವ್ವನ ಜೀವನಗಾಥೆ ಈಗ ಬೆಳ್ಳಿತೆರೆಗೆ

ಹರಿದಾಸರ ಜೀವನಗಾಥೆಗಳನ್ನು ಬೆಳ್ಳಿತೆರೆಗೆ ಪರಿಚಯಿಸುವ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಇದೀಗ ಮತ್ತೊಬ್ಬ ಮಹಾನ್ ಹರಿದಾಸಿಣಿಯ ಬದುಕನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲು ಮುಂದಾಗಿದ್ದಾರೆ. 18 ಮತ್ತು 19ನೇ ಶತಮಾನಗಳಲ್ಲಿ ಕೃಷ್ಣಭಕ್ತಿಯ ಮೂಲಕ ಪ್ರಸಿದ್ಧಿ ಪಡೆದಿದ್ದ ಹರಪನಹಳ್ಳಿ ಭೀಮವ್ವನವರ ಜೀವನಾಧಾರಿತ ‘ಹರಪನಹಳ್ಳಿ ಭೀಮವ್ವ’ ಚಿತ್ರಕ್ಕೆ ನವರಾತ್ರಿಯ ಮೊದಲ ದಿನ ಚಾಲನೆ ದೊರೆತಿದೆ. ಮಾತಾಂಬುಜ ಮೂವೀಸ್ ಸಂಸ್ಥೆಯಡಿ ಮಧುಸೂದನ್ ಹವಾಲ್ದಾರ್ ಅವರೇ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರೆ, ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರ ಯಶಸ್ಸು ಕಾಣಲಿ ಹಾಗೂ ಚಿತ್ರತಂಡದ ಪ್ರಯತ್ನಕ್ಕೆ ಶುಭವಾಗಲಿ ಎಂದು ರವೀಂದ್ರ ಜೋಶಿ ಹಾರೈಸಿದರು.
ಹರಪನಹಳ್ಳಿ ಭೀಮವ್ವ ಅವರು ಕನ್ನಡದ ಮೀರಾಬಾಯಿ ಎಂದೇ ಪ್ರಸಿದ್ಧರಾಗಿದ್ದು, ಶ್ರೀಕೃಷ್ಣನ ಅನನ್ಯ ಭಕ್ತೆಯಾಗಿ ಅನೇಕ ಭಕ್ತಿಗೀತೆಗಳನ್ನು ರಚಿಸಿದವರು. ‘ಭೀಮೇಶ ಕೃಷ್ಣ’ ಎಂಬ ಅಂಕಿತನಾಮದಲ್ಲಿ 140ಕ್ಕೂ ಹೆಚ್ಚು ದೇವರನಾಮಗಳು, ಉಗಾಭೋಗಗಳು ಹಾಗೂ ಸುಳಾದಿಗಳನ್ನು ರಚಿಸಿರುವ ಅವರ ಆಧ್ಯಾತ್ಮಿಕ ಬದುಕು ಈ ಚಿತ್ರದ ಕೇಂದ್ರವಸ್ತುವಾಗಿದೆ. ಚಿತ್ರದಲ್ಲಿ ಅಮೆರಿಕದಲ್ಲಿ ನೆಲೆಸಿರುವ ವೈಷ್ಣವಿಮೂರ್ತಿ ಅವರು ಭೀಮವ್ವನ ಪಾತ್ರ ನಿರ್ವಹಿಸುತ್ತಿದ್ದಾರೆ. ಭೀಮವ್ವನ ತಂದೆಯಾಗಿ ಗಾಯಕ ರಾಯಚೂರು ಶೇಷಗಿರಿದಾಸ್, ಗುರುವಿನ ಪಾತ್ರದಲ್ಲಿ ಗಾಯಕ ಅನಂತ ಕುಲಕರ್ಣಿ ಹಾಗೂ ಶಿಷ್ಯನ ಪಾತ್ರದಲ್ಲಿ ಗಾಯಕ ಅನಂತ ಮಿಸ್ತ್ರಿ ಕಾಣಿಸಿಕೊಳ್ಳಲಿದ್ದಾರೆ. ಭೀಮವ್ವನ ಪತಿಯ ಪಾತ್ರಕ್ಕೆ ತ್ರಿವಿಕ್ರಮ ಜೋಶಿ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ರೂಪಿಸುವ ಯೋಜನೆಯಿದ್ದು, ಒಟ್ಟು ಎಂಟು ಹಾಡುಗಳು ಇರಲಿವೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾಹಿತಿ ನೀಡಿದರು.

ಚಿತ್ರದ ಸಂಗೀತದ ಕುರಿತು ಮಾತನಾಡಿದ ಮಧುಸೂದನ್ ಹವಾಲ್ದಾರ್, ರಾಯಚೂರು ಶೇಷಗಿರಿದಾಸ್, ಅನಂತ ಕುಲಕರ್ಣಿ, ಅನಂತ ಮಿಸ್ತ್ರಿ ಹಾಗೂ ತಾವು ಸೇರಿ ಸಂಗೀತ ಸಂಯೋಜನೆ ಮಾಡುತ್ತಿರುವುದಾಗಿ ತಿಳಿಸಿದರು. ಭೀಮವ್ವನ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿಮೂರ್ತಿ ಅವರೇ ಎಂಟು ಹಾಡುಗಳನ್ನು ಹಾಡಲಿದ್ದಾರೆ. ನಟನೆಯ ಜೊತೆಗೆ ಗಾಯನದಲ್ಲಿಯೂ ಆಸಕ್ತಿ ಹೊಂದಿರುವ ಅವರು ಈ ಪಾತ್ರಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ಭೀಮವ್ವನವರ ಭಕ್ತಿ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಸಾಧನೆಯನ್ನು ಇಂದಿನ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆಯೊಂದಿಗೆ ಭಕ್ತಿಯ ಭಾವನೆಯನ್ನು ಬೆಸೆಯುವ ಈ ಸಿನಿಮಾ ಎರಡು ಭಾಷೆಗಳ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ.
ಚಿತ್ರದಲ್ಲಿ ನಟಿಸುತ್ತಿರುವ ತ್ರಿವಿಕ್ರಮ ಜೋಶಿ ಮಾತನಾಡಿ, ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಮಧುಸೂದನ್ ಹವಾಲ್ದಾರ್ ಅವರ ಪರಿಚಯವಾದ ಬಳಿಕ ತಮಗೆ ನಟನೆಯ ಅವಕಾಶ ದೊರೆಯಿತು ಎಂದು ಸ್ಮರಿಸಿದರು. ಅವರ ಹಿಂದಿನ ಹರಿದಾಸರ ಕುರಿತ ಚಿತ್ರಗಳಲ್ಲಿ ವಿಜಯದಾಸರ ಪಾತ್ರ ನಿರ್ವಹಿಸಿದ್ದ ತಾವು, ಇದೀಗ ‘ಹರಪನಹಳ್ಳಿ ಭೀಮವ್ವ’ ಚಿತ್ರದಲ್ಲಿ ಭೀಮವ್ವನವರ ಪತಿಯ ಪಾತ್ರ ಮಾಡುತ್ತಿರುವುದಾಗಿ ಹೇಳಿದರು. ವೈಷ್ಣವಿಮೂರ್ತಿ ಅವರು ಮಾತನಾಡಿ, ತಾವು ಅಮೆರಿಕದಲ್ಲಿ ನೆಲೆಸಿದ್ದರೂ ಹರಿದಾಸರ ಪರಂಪರೆಯ ಬಗ್ಗೆ ಅಪಾರ ಭಕ್ತಿ ಹೊಂದಿದ್ದು, ಭೀಮವ್ವನವರ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದರು. ಗಾಯಕ ರಾಯಚೂರು ಶೇಷಗಿರಿದಾಸ್ ಮಾತನಾಡಿ, ತಮ್ಮನ್ನು ಚಲನಚಿತ್ರ ಸಂಗೀತ ನಿರ್ದೇಶನದತ್ತ ಪರಿಚಯಿಸಿದ ಮಧುಸೂದನ್ ಹವಾಲ್ದಾರ್ ಅವರ ಚಿತ್ರದಲ್ಲೇ ಇದೀಗ ನಟನಾಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಅನುಭವ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಾಸುಮೂರ್ತಿ, ಪವನ್ ಕುಮಾರ್, ಸಿ.ಆರ್. ಮುರಳಿ, ವಾಸುದೇವ ಅಗ್ನಿಹೋತ್ರಿ ಹಾಗೂ ಹರಪನಹಳ್ಳಿ ಭೀಮವ್ವನವರ ವಂಶಸ್ಥರು ಉಪಸ್ಥಿತರಿದ್ದರು.
