Cinema News
ಸಾಮಾನ್ಯನೊಬ್ಬ ಸಿಎಂ ಆದರೆ ಆಡಳಿತ ಹೇಗಿರುತ್ತೆ? ‘ಕಾಮನ್ ಮ್ಯಾನ್’ ಟ್ರೈಲರ್‌ನಲ್ಲಿ ಕುತೂಹಲ

ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಆಡಳಿತದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು, ಜನರಿಗಾಗಿ ಏನೆಲ್ಲಾ ಸುಧಾರಣೆಗಳನ್ನು ಕೈಗೊಳ್ಳಬಹುದು ಹಾಗೂ ಅಧಿಕಾರದ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬ ಕುತೂಹಲಕಾರಿ ಕಥಾಹಂದರ ಹೊಂದಿರುವ ‘ಕಾಮನ್ ಮ್ಯಾನ್’ ಚಿತ್ರ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ವಿಭಿನ್ನ ಕಥಾವಸ್ತುವಿನ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಡಾ. ಎನ್. ನರಸಿಂಹ ಮೂರ್ತಿ ಕಥೆ ಬರೆದು ಸುರಭಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದ 106ನೇ ಚಿತ್ರವಾಗಿದೆ.
‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿ. ಮನೋಹರ್, ಚಿತ್ರದ ಪರಿಕಲ್ಪನೆ ಹಾಗೂ ಟ್ರೈಲರ್‌ನಲ್ಲಿರುವ ಅಂಶಗಳು ಸಹಜವಾಗಿಯೇ ಕುತೂಹಲ ಮೂಡಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾನ್ಯ ಪ್ರಜೆಯೊಬ್ಬ “ವಿಧಾನಸೌಧದ ಮೇಲೆ ನನಗೂ ಹಕ್ಕಿದೆ, ಅದನ್ನು ನನಗೆ ಬರೆದುಕೊಡಿ” ಎಂದು ಕೇಳುವ ಸನ್ನಿವೇಶವೇ ಚಿತ್ರದ ವಿಭಿನ್ನತೆಯನ್ನು ತೋರಿಸುತ್ತದೆ ಎಂದ ಅವರು, ಸಿನಿಮಾ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಟ ಬಲ ರಾಜ್ ವಾಡಿ ನಾಯಕನ ತಂದೆ ಹಾಗೂ ರಂಗಭೂಮಿ ಕಲಾವಿದನ ಪಾತ್ರದಲ್ಲಿ ನಟಿಸಿರುವುದಾಗಿ ತಿಳಿಸಿದರು. ನಿರ್ಮಾಪಕರ ಅಳಿಯ ಹಾಗೂ ನಟ ಕಿರಣ್, ಚಿತ್ರದಲ್ಲಿ ಮುಖ್ಯಮಂತ್ರಿಯ ಮಗನ ಪಾತ್ರ ನಿರ್ವಹಿಸಿರುವುದಾಗಿ ಹೇಳಿದರು. ನಿರ್ಮಾಪಕ ಡಾ. ಎನ್. ನರಸಿಂಹ ಮೂರ್ತಿ, ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಪ್ರೇಕ್ಷಕರು ಸೆಪ್ಟೆಂಬರ್ 25ರಂದು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಚಿತ್ರ ಈಗಾಗಲೇ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗಿದ್ದು, ಕನ್ನಡ ಬಿಡುಗಡೆಯ ಫಲಿತಾಂಶದ ಆಧಾರದ ಮೇಲೆ ಇತರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ತಿಳಿಸಿದರು.

ಚಿತ್ರದ ನಾಯಕ ಗೌರಿಶಂಕರ್, ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕನಸು ಅಥವಾ ಆಸೆ ಇರುತ್ತದೆ; ಅದೇ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿ ಸ್ಥಾನಕ್ಕೇರಿದರೆ ಏನು ಬದಲಾವಣೆ ತರಬಹುದು ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂದರು. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನಯ ಚಂದ್ರ ಸಂಗೀತ, ಜೆ.ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚೈತ್ರಾ ಆಚಾರ್, ಕೈಲಾಶ್ ಖೇರ್ ಹಾಗೂ ಬಾಬಾ ಸೈಗಲ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
