Cinema News
ಕುಟುಂಬ ಸಮೇತ ದಸರಾ ಆಚರಿಸಿ, ‘ಬೃಂದಾವಿಹಾರಿ’ ನೋಡಿ; ಅಕ್ಟೋಬರ್ 16ಕ್ಕೆ ವಿಶ್ವದಾದ್ಯಂತ ಬಿಡುಗಡೆ

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ, ಗಣೇಶ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ ರಾಜು ಮತ್ತೊಮ್ಮೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಗೆ ಪ್ರಮುಖ ಕಾರಣವಾಗಿದೆ. ಮುಳಬಾಗಿಲಿನ ಶಾಸಕ ಹಾಗೂ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅದ್ದೂರಿಯಾಗಿ ನಿರ್ಮಿಸಿರುವ ‘ಬೃಂದಾವಿಹಾರಿ’ ಈಗಾಗಲೇ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದೆ. ಚಿತ್ರದ ಪ್ರಚಾರಕ್ಕೆ ಚಾಲನೆ ನೀಡುವ ಸಲುವಾಗಿ ಇತ್ತೀಚೆಗೆ ‘ಪ್ರಚಾರ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ವೇಳೆ ಈಗಾಗಲೇ ಜನಪ್ರಿಯವಾಗಿರುವ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ್, ಹಿರಿಯ ನಟಿ ಲಕ್ಷ್ಮಿ ಅವರೊಂದಿಗೆ ಕೆಲಸ ಮಾಡಿರುವುದು ಸಂತಸದ ಅನುಭವ ಎಂದು ಹೇಳಿದರು. ಅಶೋಕ್, ರಾಮ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಿರಿಯ ಕಲಾವಿದರ ಜೊತೆ ನಟಿಸಿದ್ದು ತಮ್ಮ ವೃತ್ತಿಜೀವನದ ವಿಶೇಷ ಅನುಭವವಾಗಿದೆ ಎಂದರು. ಚಿತ್ರದಲ್ಲಿ ‘ಮಾಧವ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗಣೇಶ್, ಮುಗ್ಧತೆ, ಭಾವನೆ ಮತ್ತು ಸಂಬಂಧಗಳಿಗೆ ಮಹತ್ವ ನೀಡುವ ಪಾತ್ರ ಇದಾಗಿದೆ ಎಂದು ವಿವರಿಸಿದರು. ಎಮೋಷನ್, ಕಾಮಿಡಿ ಹಾಗೂ ಸಂಬಂಧಗಳನ್ನು ಒಂದೇ ಕಥೆಯಲ್ಲಿ ಸಮರ್ಥವಾಗಿ ಕಟ್ಟಿಕೊಡುವುದು ಸವಾಲಾಗಿತ್ತು. ಆದರೆ ನಿರ್ದೇಶಕ ಶ್ರೀನಿವಾಸ ರಾಜು ಪ್ರತಿಯೊಬ್ಬರಿಂದಲೂ ಅತ್ಯುತ್ತಮ ಅಭಿನಯ ಹೊರತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಇದು ನಿಮ್ಮ ಗಣೇಶನ ಅಪ್ಪಟ ಕನ್ನಡ ಸಿನಿಮಾ’ ಎಂದು ಹೇಳಿರುವ ಅವರು, ದಸರಾ ಸಂದರ್ಭದಲ್ಲಿ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದು ಮನವಿ ಮಾಡಿದರು.

ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, ‘ಬೃಂದಾವಿಹಾರಿ’ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಸುಮಾರು 1300 ಪರದೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದು ತಿಳಿಸಿದರು. ಜೈಲರ್-2 ಬಿಡುಗಡೆಯ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುತ್ತಿರುವ ಬಗ್ಗೆ ಕೆಲವರು ಪ್ರಶ್ನಿಸಿದರೂ, ಇದು ತಮ್ಮ ಕನ್ನಡ ಸಿನಿಮಾ ಎಂಬ ನಂಬಿಕೆಯಿಂದಲೇ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು. ಕೆವಿಎನ್ ಸಂಸ್ಥೆ ಚಿತ್ರವನ್ನು ವಿತರಿಸುತ್ತಿದೆ. ಮೇಲುಕೋಟೆಯಲ್ಲಿ ಪೂಜೆ ಸಲ್ಲಿಸಿ ಚಿತ್ರೀಕರಣ ಆರಂಭಿಸಲಾಗಿದ್ದು, ಮೊದಲ ಹಂತದ ಶೂಟಿಂಗ್ 56 ದಿನಗಳ ಕಾಲ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ನಡೆದಿದೆ. ಒಂದು ಸಾವಿರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗಿ ನಿರ್ಮಾಪಕರು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿದ್ದು, ಚಿತ್ರಕ್ಕೆ ಉತ್ತಮ ಹಾಡುಗಳನ್ನು ನೀಡಿರುವುದಾಗಿ ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕ ಶ್ರೀನಿವಾಸ ರಾಜು, ‘ಬೃಂದಾವಿಹಾರಿ’ ತಮ್ಮ ವೃತ್ತಿಜೀವನದಲ್ಲಿ ವಿಶೇಷ ತೃಪ್ತಿ ನೀಡಿರುವ ಸಿನಿಮಾ ಎಂದು ಹೇಳಿದರು. ಈ ಚಿತ್ರಕ್ಕೆ ನಿಜವಾದ ನಾಯಕ ಗಣೇಶ್ ಅವರೇ ಎಂದು ಶ್ಲಾಘಿಸಿದ ಅವರು, ಅದ್ಭುತವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದರು. ಹಿರಿಯ ನಟ ರಂಗಾಯಣ ರಘು ಚಿತ್ರದಲ್ಲಿ ನೂರಾರು ಕಲಾವಿದರು ಅಭಿನಯಿಸಿದ್ದು, ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದಾಗಿದೆ ಎಂದು ಹೇಳಿದರು. ನಾಯಕಿ ಮಾಳವಿಕ ಶರ್ಮಾ ಕನ್ನಡದಲ್ಲಿ ಇದು ತಮ್ಮ ಮೊದಲ ಸಿನಿಮಾ ಆಗಿದ್ದು, ‘ಮೀರಾ’ ಎಂಬ ಕೃಷ್ಣನ ಪರಮಭಕ್ತೆಯ ಪಾತ್ರದಲ್ಲಿ ನಟಿಸಿರುವುದಾಗಿ ತಿಳಿಸಿದರು. ಮತ್ತೊಬ್ಬ ನಟಿ ದೇವಿಕಾ ಭಟ್‌ಗೂ ಇದು ಚೊಚ್ಚಲ ಚಿತ್ರವಾಗಿದ್ದು, ಇಡೀ ತಂಡ ನೀಡಿದ ಬೆಂಬಲದಿಂದ ಉತ್ತಮವಾಗಿ ಅಭಿನಯಿಸಲು ಸಾಧ್ಯವಾಯಿತು ಎಂದರು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್, ಕಲಾ ನಿರ್ದೇಶಕ ರವಿ ಸಂತೆಹಕ್ಲು, ನೃತ್ಯ ನಿರ್ದೇಶಕ ಭಾನು, ಸಂಭಾಷಣೆಕಾರ ವಿಜಯ್ ಈಶ್ವರ್, ಕೋ-ರೈಟರ್ ಕ್ರಾಂತಿ ಕುಮಾರ್ ಹಾಗೂ ಕುರಿ ಪ್ರತಾಪ್, ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
