Cinema News
ನಾಯಕನಾಗಿ ಪ್ರಮೋದ್ ಶೆಟ್ಟಿಗೆ ಹೊಸ ಇಮೇಜ್; ‘ಕೌಸ್ತುಭ’ನಲ್ಲಿ ಖಾಕಿ ಅವತಾರ

ನಟ ಪ್ರಮೋದ್ ಶೆಟ್ಟಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ‘ಕೌಸ್ತುಭ’ ಚಿತ್ರತಂಡ ಅವರ ಪೊಲೀಸ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ. ವಿಭಿನ್ನ ಕಥಾಹಂದರದ ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ‘ಚಾಣಕ್ಯ’ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪೋಷಕ, ಖಳ ಹಾಗೂ ಪ್ರಮುಖ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟನಿಗೆ ‘ಕೌಸ್ತುಭ’ ಮತ್ತೊಂದು ವಿಭಿನ್ನ ಇಮೇಜ್ ನೀಡಲಿದೆ ಎಂಬ ವಿಶ್ವಾಸ ನಿರ್ದೇಶಕ ಸಿದ್ದು ವಜ್ರಪ್ಪ ಅವರದ್ದು. ಫಸ್ಟ್ ಲುಕ್ ಕೂಡ ಪಾತ್ರದ ಗಂಭೀರತೆಯ ಬಗ್ಗೆ ಕುತೂಹಲ ಮೂಡಿಸಿದೆ.
‘ಕೌಸ್ತುಭ’ ಒಂದು ಪತ್ತೆದಾರಿ ಕಥೆಯಾಗಿದ್ದು, ಸಿನಿಮಾದ ಕಥೆ ಮತ್ತು ಕ್ಲೈಮ್ಯಾಕ್ಸ್ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯಕ್ಕೆ ಬಹಿರಂಗಪಡಿಸಲು ಸಿದ್ಧವಿಲ್ಲ. ಆದರೆ ಚಿತ್ರದಲ್ಲಿನ ಪೊಲೀಸ್ ಪಾತ್ರ ಹಾಗೂ ಅಂತಿಮ ಘಟ್ಟ ಎರಡೂ ವಿಭಿನ್ನವಾಗಿರಲಿವೆ ಎಂಬ ಸುಳಿವನ್ನು ಪ್ರಮೋದ್ ಶೆಟ್ಟಿ ನೀಡಿದ್ದಾರೆ. ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಅವರು ತಮ್ಮ ದೇಹದ ಮೇಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ‘ಲಾಫಿಂಗ್ ಬುದ್ಧ’ ಪಾತ್ರಕ್ಕಾಗಿ ಹೆಚ್ಚಿಸಿಕೊಂಡಿದ್ದ ತೂಕದಿಂದ ಬರೋಬ್ಬರಿ 27 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಇದುವರೆಗಿನ ಪಾತ್ರಗಳಲ್ಲಿ ಹಾಸ್ಯಮಿಶ್ರಿತ ಅಭಿನಯಕ್ಕೂ ಹೆಸರಾಗಿದ್ದ ಪ್ರಮೋದ್, ಇಲ್ಲಿ ಗಂಭೀರ ಪೊಲೀಸ್ ಅಧಿಕಾರಿಯಾಗಿ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ನಾಲ್ಕು ಪ್ರಮುಖ ಸಾಹಸ ದೃಶ್ಯಗಳಿದ್ದು, ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಇದಾಗಿದೆ ಎನ್ನಬಹುದು.

ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೂ ‘ಕೌಸ್ತುಭ’ ಎರಡನೇ ಸಿನಿಮಾ. ಕಳೆದ ವರ್ಷ ‘ರಾವುತ’ ಎಂಬ ಪ್ರಯೋಗಾತ್ಮಕ ಚಿತ್ರದ ಮೂಲಕ ಗಮನ ಸೆಳೆದಿದ್ದ ಅವರು, ಪ್ರಮೋದ್ ಶೆಟ್ಟಿಯವರನ್ನೇ ಕೇಂದ್ರವಾಗಿಟ್ಟುಕೊಂಡು ಈ ಕಥೆಯನ್ನು ಸಿದ್ಧಪಡಿಸಿ, ಅವರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಸಿನಿಮಾದೊಳಗೆ ಮತ್ತೊಂದು ಸಿನಿಮಾ ಇರುವ ವಿಶೇಷ ಪರಿಕಲ್ಪನೆ ಚಿತ್ರದಲ್ಲಿದ್ದು, ರಾಜಕೀಯ ಹಾಗೂ ಚಿತ್ರರಂಗದ ನಡುವಿನ ಸಂಬಂಧವನ್ನೂ ಕಥೆ ಪ್ರಮುಖವಾಗಿ ಚರ್ಚಿಸಲಿದೆ. ಈಗಾಗಲೇ ಸುಮಾರು ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ಮುಂದಿನ ವರ್ಷ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

‘ಕೌಸ್ತುಭ’ನಲ್ಲಿ ನಾಯಕನ ಎಂಟ್ರಿಗೆಂದೇ ವಿಶೇಷ ಹಾಡೊಂದನ್ನು ಸಿದ್ಧಪಡಿಸಲಾಗಿದ್ದು, ಮತ್ತೊಂದು ಗೀತೆಗೆ ರಿಯಲ್ ಸ್ಟಾರ್ ಉಪೇಂದ್ರ ಧ್ವನಿ ನೀಡಲಿದ್ದಾರೆ ಎನ್ನಲಾಗಿದೆ. ‘ವಿದ್ಯಾಪತಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಡಾಸ್ ಮೋಡ್ ಈ ಸಿನಿಮಾಗೂ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಒಂದು ಹಾಡನ್ನು ನಿರ್ದೇಶಕ ಸಿದ್ದು ವಜ್ರಪ್ಪ ಅವರೇ ರಚಿಸಿದ್ದಾರೆ. ಮತ್ತೊಂದು ಗೀತೆಗೆ ಪ್ರಶಾಂತ್ ಬಾಗೂರು ಸಾಹಿತ್ಯ ಬರೆದಿದ್ದಾರೆ. ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ, ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿ ಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರವಿಂದ್ ರಾಜ್ ಸಂಕಲನ ಹಾಗೂ ದಿಲೀಪ್ ಎಂ. ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಎವಿಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ರಾಜೇಶ್ ಧನಪಾಲ್ ನಿರ್ಮಿಸುತ್ತಿರುವ ‘ಕೌಸ್ತುಭ’ ಸದ್ಯದಿಂದಲೇ ಕುತೂಹಲ ಮೂಡಿಸಿದೆ.
