Cinema News
ಕಾಮಿಡಿ, ಲವ್ & ಸಸ್ಪೆನ್ಸ್; ಕೋಮಲ್ ‘ರೋಲೆಕ್ಸ್’ ಟೀಸರ್ ಔಟ್!

ಕೋಮಲ್ ಕುಮಾರ್ ವಿಭಿನ್ನ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ ಚಿತ್ರದ ಟೀಸರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೋನಾಲ್ ಮೊಂತೆರೊ ನಾಯಕಿಯಾಗಿ ನಟಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ಹಲವು ಹಿರಿಯ ಹಾಗೂ ಜನಪ್ರಿಯ ಕಲಾವಿದರು ಸಿನಿಮಾದ ತಾರಾಬಳಗದಲ್ಲಿದ್ದಾರೆ. ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಟೀಸರ್ ಅನಾವರಣಗೊಳಿಸಿದ್ದು, ಬಳಿಕ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ಚಿತ್ರದ ಮೊದಲ ಕಾಪಿಯನ್ನು ವೀಕ್ಷಿಸಿದ ನಿರ್ಮಾಪಕರು ಸಂತಸ ವ್ಯಕ್ತಪಡಿಸಿರುವುದು ಚಿತ್ರತಂಡದ ಪರಿಶ್ರಮಕ್ಕೆ ಸಿಕ್ಕ ಮೆಚ್ಚುಗೆ ಎಂದು ಹೇಳಿದರು. ಕೋಮಲ್ ಕುಮಾರ್ ತಮ್ಮ ವಿಶಿಷ್ಟ ಅಭಿನಯದ ಮೂಲಕ ಇಡೀ ಸಿನಿಮಾವನ್ನು ಮುನ್ನಡೆಸಿದ್ದು, ಪ್ರೇಕ್ಷಕರಿಗೆ ನಗೆಯ ರಸದೌತಣ ನೀಡಲಿದ್ದಾರೆ ಎಂದರು. ಪ್ರೀತಿ ಹಾಗೂ ಹಾಸ್ಯದೊಂದಿಗೆ ಸಾಗುವ ‘ರೋಲೆಕ್ಸ್’ ಭಾವನಾತ್ಮಕ ಕೌಟುಂಬಿಕ ಕಥಾಹಂದರ ಹೊಂದಿದ್ದು, ಎಲ್ಲ ವಯೋಮಾನದವರು ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರವಾಗಿದೆ ಎಂದು ತಿಳಿಸಿದರು. ಸೋನಾಲ್ ಮೊಂತೆರೊ ಚಿತ್ರಕ್ಕೆ ಸೇರ್ಪಡೆಯಾದ ನಂತರ ಕಥೆಗೆ ಮತ್ತಷ್ಟು ಮೆರುಗು ಬಂದಿದ್ದು, ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಮಲ್ ಕುಮಾರ್ ಮಾತನಾಡಿ, ವಿನೋದ್ ಪ್ರಭಾಕರ್ ಅವರೊಂದಿಗೆ ತೆರೆ ಹಂಚಿಕೊಂಡಿರುವುದು ಸಂತಸ ತಂದಿದೆ ಎಂದರು. ‘ಮಿಸ್ಟರ್ ಗರಗಸ’ ಬಳಿಕ ವಿಭಿನ್ನ ಕಥೆ ಹಾಗೂ ಪಾತ್ರಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ‘ರೋಲೆಕ್ಸ್’ ಅವಕಾಶ ದೊರೆತಿದೆ. ನಿರ್ದೇಶಕರು ಕಥೆಗೆ ಬೇಕಾದ ರೀತಿಯಲ್ಲಿ ಸಿನಿಮಾವನ್ನು ರೂಪಿಸಿದ್ದಾರೆ ಎಂದು ಹೇಳಿದರು. ಸೋನಾಲ್ ಮೊಂತೆರೊ, ಚಿತ್ರತಂಡದ ಪ್ರತಿಯೊಬ್ಬರೂ ಕುಟುಂಬದವರಂತೆ ತಮ್ಮನ್ನು ನೋಡಿಕೊಂಡಿದ್ದಾರೆ ಎಂದು ಹೇಳಿ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು. ಕೋಮಲ್ ಅವರೊಂದಿಗೆ ಇದೇ ಮೊದಲ ಬಾರಿ ಕೆಲಸ ಮಾಡಿದ್ದು, ಅವರಿಂದ ಸಾಕಷ್ಟು ಕಲಿಯಲು ಸಾಧ್ಯವಾಯಿತು ಎಂದ ಅವರು, ಚಿತ್ರದಲ್ಲಿ ತಾವು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ವಿನೋದ್ ಪ್ರಭಾಕರ್ ಕೂಡ ತಮ್ಮ ಪಾತ್ರ ಕಥೆಯಲ್ಲಿ ಪ್ರಮುಖವಾಗಿದ್ದು, ಇಡೀ ತಂಡದ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದರು.

ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ, ಲೈಟ್‌ಬಾಯ್‌ನಿಂದ ನಿರ್ದೇಶಕರವರೆಗೆ ಪ್ರತಿಯೊಬ್ಬರ ಪರಿಶ್ರಮವೇ ಸಿನಿಮಾದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಹೇಳಿದರು. ತೆಲುಗಿನಿಂದ ಬಂದು ಕನ್ನಡ ಚಿತ್ರ ನಿರ್ಮಿಸಿರುವ ಅನುಭವವನ್ನು ಹಂಚಿಕೊಂಡ ಅವರು, ಸಿನಿಮಾಗೆ ಭಾಷೆ ಹಾಗೂ ಗಡಿಯ ಮಿತಿ ಇಲ್ಲ ಎಂದು ಅಭಿಪ್ರಾಯಪಟ್ಟರು. ‘ರೋಲೆಕ್ಸ್’ನಲ್ಲಿ ಸಸ್ಪೆನ್ಸ್, ಕಾಮಿಡಿ ಸೇರಿದಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಹಲವು ಅಂಶಗಳಿವೆ ಎಂದರು. ಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ, ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು. ರಾಣಾ, ಸುನಂದ ಕಲಬುರಗಿ, ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ್ ರೆಡ್ಡಿ ಹಾಗೂ ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಚಿತ್ರತಂಡದ ಹಲವರು ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
