Cinema News
ಶಾಸ್ತ್ರಿ ದರ್ಶನ್ ಕಟೌಟ್ ಮುಂದೆ ‘ದೇವಿ’ಯ ಭರ್ಜರಿ ಸಾಹಸ!

ಮಂಡ್ಯದ ಯುವರೈತ ಚೇತನ್‌ಗೌಡ ನಾಯಕನಾಗಿ ಅಭಿನಯಿಸುತ್ತಿರುವ ‘ದೇವಿ’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಬಿಗ್‌ಬಾಸ್ ಖ್ಯಾತಿಯ ಭವ್ಯಗೌಡ ನಾಯಕಿಯಾಗಿ ನಟಿಸುತ್ತಿದ್ದು, ‘ಅಮ್ಮ ಅಂದ್ರೆ ತುಪ್ಪ, ಅಮ್ಮನ್ ಅಂದ್ರೆ ಹಾಲು ತುಪ್ಪಾ’ ಎಂಬ ಅಡಿ ಬರಹವನ್ನು ಚಿತ್ರ ಹೊಂದಿದೆ. ಚೇತನ್‌ಗೌಡ ಅವರೇ ಕಥೆ ಹಾಗೂ ಚಿತ್ರಕಥೆ ಬರೆದಿರುವ ಈ ಸಿನಿಮಾಗೆ ಪ್ರಕಾಶ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಲಗ್ಗೆರೆಯ ಆಕಾಶ್ ಚಿತ್ರಮಂದಿರದ ಎದುರು ನಿಲ್ಲಿಸಿರುವ ದರ್ಶನ್ ಅವರ 50 ಅಡಿ ಎತ್ತರದ ಕಟೌಟ್ ಮುಂದೆ ಕಳೆದ ಎರಡು ದಿನಗಳಿಂದ ಚಿತ್ರದ ಪ್ರಮುಖ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಸಾಹಸ ನಿರ್ದೇಶಕ ದಿಲೀಪ್ ಆಕ್ಷನ್ ಸನ್ನಿವೇಶವನ್ನು ಸಂಯೋಜಿಸುತ್ತಿದ್ದಾರೆ.
ಚಿತ್ರೀಕರಣದಲ್ಲಿ ಚೇತನ್‌ಗೌಡ ಅವರೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದು, ಹಾಸ್ಯನಟರಾದ ಹುಲಿ ಕಾರ್ತೀಕ್, ಜಗ್ಗ, ಕಾಕ್ರೋಚ್ ಸುಧಿ ಹಾಗೂ ಯಶ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್‌ಗೌಡ, ಜೀವನದಲ್ಲಿ ಸಾಧನೆ ಮಾಡಬೇಕೆಂಬ ಕನಸಿನೊಂದಿಗೆ ಹಳ್ಳಿಯಿಂದ ನಗರಕ್ಕೆ ಬರುವ ಯುವಕನೊಬ್ಬ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಸಿಲುಕಿ ರೌಡಿಸಂನತ್ತ ಹೆಜ್ಜೆ ಇಡುವ ಕಥೆಯನ್ನು ‘ದೇವಿ’ ಹೊಂದಿದೆ ಎಂದು ಹೇಳಿದರು. ತಾವು ದರ್ಶನ್ ಅವರ ಅಭಿಮಾನಿಯಾಗಿದ್ದು, ಸಿನಿಮಾದಲ್ಲೂ ದರ್ಶನ್ ಅಭಿಮಾನಿಯ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ‘ಶಾಸ್ತ್ರಿ’ ಸಿನಿಮಾ ಮರುಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ನಾಯಕ ಸಿನಿಮಾ ನೋಡಲು ಥಿಯೇಟರ್‌ಗೆ ಬರುವ ಸನ್ನಿವೇಶ ಹಾಗೂ ಅಲ್ಲಿ ವಿಲನ್‌ಗಳೊಂದಿಗೆ ನಡೆಯುವ ಫೈಟ್ ಅನ್ನು ದರ್ಶನ್ ಕಟೌಟ್ ಮುಂದೆ ಚಿತ್ರೀಕರಿಸಲಾಗುತ್ತಿದೆ ಎಂದರು.

ಶರತ್‌ಬಾಬು ಚಿತ್ರದ ಪ್ರಮುಖ ಖಳನಾಯಕನಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲೂ ಒಂದು ಸಾಹಸ ದೃಶ್ಯವನ್ನು ಚಿತ್ರತಂಡ ಚಿತ್ರೀಕರಿಸಿದೆ. ‘ಶಾಸ್ತ್ರಿ’ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರು ಕೂಡ ‘ದೇವಿ’ ಚಿತ್ರತಂಡಕ್ಕೆ ಉತ್ತಮ ಬೆಂಬಲ ನೀಡುತ್ತಿದ್ದಾರೆ ಎಂದು ಚೇತನ್‌ಗೌಡ ಹೇಳಿದರು. ನಿರ್ದೇಶಕ ಪ್ರಕಾಶ್‌ಕುಮಾರ್ ಮಾತನಾಡಿ, ಪ್ರಸ್ತುತ ಚಿತ್ರೀಕರಿಸುತ್ತಿರುವುದು ಚಿತ್ರದ ಪ್ರಮುಖ ಆಕ್ಷನ್ ಸೀಕ್ವೆನ್ಸ್ ಆಗಿದ್ದು, ಈಗಾಗಲೇ ಏಳೆಂಟು ದಿನಗಳ ಶೂಟಿಂಗ್ ಪೂರ್ಣಗೊಂಡಿದೆ. ಇನ್ನೂ ಸುಮಾರು 45 ದಿನಗಳ ಚಿತ್ರೀಕರಣ ಬಾಕಿಯಿದ್ದು, ಹೆಚ್ಚಿನ ಭಾಗ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಮಂಡ್ಯದಲ್ಲಿ ಹತ್ತು ದಿನ ಹಾಗೂ ನಂತರ ಶಿವಮೊಗ್ಗದಲ್ಲೂ ಶೂಟಿಂಗ್ ನಡೆಸಲು ಯೋಜಿಸಲಾಗಿದೆ. ನಾಯಕ ದರ್ಶನ್ ಅಭಿಮಾನಿಯಾಗಿರುವುದರಿಂದ ಅವರ ಮ್ಯಾನರಿಸಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ, ಆದರೆ ಕೈಯಲ್ಲಿ ಮಚ್ಚು ಹಿಡಿಸುವುದಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

ಯಶ್ ಶೆಟ್ಟಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದು, ಆರಂಭದಲ್ಲಿ ನೆಗೆಟಿವ್ ಆಗಿರುವ ತನ್ನ ಪಾತ್ರ ನಂತರ ಸಕಾರಾತ್ಮಕವಾಗಿ ಬದಲಾಗಲಿದೆ ಎಂದಿದ್ದಾರೆ. ಹುಲಿ ಕಾರ್ತೀಕ್, ಇಂದಿನ ದಿನಗಳಲ್ಲಿ ಸಿನಿಮಾಗಳ ನಿರ್ಮಾಣವೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಚೇತನ್‌ಗೌಡ ಅವರಂತಹ ನಟರು ಹಾಗೂ ನಿರ್ಮಾಪಕರು ಬೆಳೆಯಬೇಕು ಎಂದು ಆಶಿಸಿದ್ದಾರೆ. ಜಗ ಮಮ್ಮಿ, ಕಾಕ್ರೋಚ್ ಸುಧಿ ಹಾಗೂ ನಾಯಕಿಯ ಸ್ನೇಹಿತೆಯಾಗಿ ಶ್ರೇಯಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆಕ್ಷನ್, ತಾಯಿ ಸೆಂಟಿಮೆಂಟ್ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುವ ‘ದೇವಿ’ ಚಿತ್ರಕ್ಕೆ ಅಜಿತ್‌ಕುಮಾರ್ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಹಾಗೂ ಮಾಸ್ತಿ ಸಂಭಾಷಣೆ ಇದೆ.
