Cinema News
ಸೆನ್ಸಾರ್ ಕ್ಲಿಯರ್ ಮಾಡಿದ ಕೋಮಲ್ ಕುಮಾರ್ ಅವರ ‘ರೋಲೆಕ್ಸ್’; ಶೀಘ್ರದಲ್ಲೇ ಗ್ರ್ಯಾಂಡ್ ರಿಲೀಸ್

ಮಧು ಫಿಲಂ ಸರ್ಕ್ಯೂಟ್ಸ್ ಬ್ಯಾನರ್ ಅಡಿಯಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ, ಶ್ರೀನಿವಾಸ್ ಮಂಡ್ಯ ನಿರ್ದೇಶನದ ‘ರೋಲೆಕ್ಸ್’ ಚಿತ್ರ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೋಮಲ್ ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು U/A ಪ್ರಮಾಣಪತ್ರ ನೀಡಿದ್ದು, ಮನೋರಂಜನೆಯ ಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಥ್ರಿಲ್ಲರ್ ಹಾಗೂ ಕಾಮಿಡಿ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿದೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿ ಕೋಮಲ್ ಕುಮಾರ್ ಅವರ ಸ್ಟೈಲಿಶ್ ಲುಕ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದು, ಬಿಡುಗಡೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಗಣವೂ ಚಿತ್ರದಲ್ಲಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಜೆಸ್ಟ್ ಗಿಫ್ಟ್ ಸಂಗೀತ ನೀಡಿದ್ದಾರೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ನಿರ್ವಹಿಸಿದ್ದು, ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಹಾಗೂ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.
