Cinema News
ಪತ್ರಕರ್ತರ ದಿನಾಚರಣೆಯಲ್ಲಿ ‘ಬ್ಯೂಟಿ’ ಟ್ರೈಲರ್ ಅನಾವರಣ; ಮಹಿಳಾ ಪ್ರಧಾನ ಕಥೆಗೆ ಮೆಚ್ಚುಗೆ

ಪತ್ರಕರ್ತರ ದಿನಾಚರಣೆಯ ಅಂಗವಾಗಿ ಪತ್ರಿಕೆ ಮುಖ್ಯಸ್ಥ ಭಾಷಾ ಅವರಿಂದ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಬ್ಯೂಟಿ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು. ಟ್ರೈಲರ್ ಬಿಡುಗಡೆಯೊಂದಿಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಮಹಿಳೆಯರ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮನರಂಜನೆಯೊಂದಿಗೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
ಕಲ್ಪವೃಕ್ಷ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪಿ. ಮುರಳಿ ಕೃಷ್ಣ ಅರ್ಪಿಸಿದ್ದು, ರಾಜಾ ರವಿ ಕುಮಾರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ತನುಜಾ ಮುರಳಿ ಕೃಷ್ಣ ನಿರ್ಮಾಪಕರಾಗಿದ್ದು, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮೇಲ್ಕೋಟೆಯಲ್ಲಿ ನಡೆದಿದ್ದು, ಟ್ರೈಲರ್ನಲ್ಲಿ ಅಲ್ಲಿನ ನೈಸರ್ಗಿಕ ಸೌಂದರ್ಯ ಮನಸೆಳೆಯುತ್ತದೆ.

ಚಿತ್ರದ ನಾಯಕ ರವಿಕಾಂತ್ ಈ ಪಾತ್ರಕ್ಕಾಗಿ ವಿಶೇಷವಾಗಿ ಭರತನಾಟ್ಯ ಅಭ್ಯಾಸ ಮಾಡಿದ್ದು, ನಾಯಕಿಯಾಗಿ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ. ಈ ವೇಳೆ ಮಾತನಾಡಿದ ಮಹಾಲಕ್ಷ್ಮಿ, “ಸುಂದರ ಮುಖಕ್ಕಿಂತ ಸುಂದರ ಮನಸ್ಸು ಮುಖ್ಯ” ಎಂದು ಹೇಳಿ, ಉತ್ತಮ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ನಿರ್ದೇಶಕ ರಾಜಾ ರವಿ ಕುಮಾರ್ ಸಹ ಕನ್ನಡಿಗರು ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಚಿತ್ರವನ್ನು ಬಾಗೂರು ಟಾಕೀಸ್ ಮೂಲಕ ಬಾಗೂರು ಪ್ರಶಾಂತ್ ವಿತರಣೆ ಮಾಡುತ್ತಿದ್ದು, ಮೊದಲ ಹಂತದಲ್ಲಿ ಸುಮಾರು 35 ಚಿತ್ರಮಂದಿರಗಳಲ್ಲಿ ಜುಲೈ 10ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ, ನಿರ್ಮಾಪಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಉತ್ತಮ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಅಗತ್ಯದ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ವಿ. ಮನೋಹರ್, ಕುಶಾಲ್ ಕೃಷ್ಣ, ಕುಸುಮ ಕೃಷ್ಣ, ಅನ್ನಪೂರ್ಣ, ಅಂಜನಾ, ಶಿವಮೊಗ್ಗ ರಾಮಣ್ಣ, ಮನ್ಮೋಹನ್, ಚಕ್ರವರ್ತಿ ದಾವಣಗೆರೆ, ಮಹೇಶ್ ಕುಕ್ಕೆ, ಹೇಮಂತ್ ಕುಮಾರ್, ಸಿದ್ದಾರ್ಥ್ ಕಾರಟಗಿ, ರಾಗ್ವೀರ್ ಸುರಾಗ ಹಾಗೂ ಬೇಬಿ ಆಯುಷ್ಕ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
