Cinema News
ಮಂತ್ರಾಲಯದಲ್ಲಿ ‘ರಾಯರ ದರ್ಶನ’ ಆಲ್ಬಂ ಸಾಂಗ್ ಅನಾವರಣ; ಶ್ರೀಸುಬುಧೇಂದ್ರ ತೀರ್ಥರಿಂದ ಬಿಡುಗಡೆ

ಮಂತ್ರಾಲಯದ ಶ್ರೀಮಠದಲ್ಲಿ ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ ಅರ್ಪಿಸಿರುವ ‘ರಾಯರ ದರ್ಶನ’ ಆಲ್ಬಂ ಸಾಂಗ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಆಶೀರ್ವಾದ ನೀಡಿದರು.
ರಘು ಭಟ್ ನಿರ್ದೇಶನದಲ್ಲಿ, ಸುಗುಣ ಭಟ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಆಲ್ಬಂಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಬ್ಬಿ ವಿ ಹಾಡಿರುವ ಈ ಗೀತೆಯಲ್ಲಿ ಕೇವಲ ಸಂಗೀತ ಮಾತ್ರವಲ್ಲದೆ ಮಂತ್ರಾಲಯದ ಪೂಜೆ, ದೈನಂದಿನ ಸೇವೆಗಳು ಹಾಗೂ ವಾರ್ಷಿಕ ಉತ್ಸವಗಳ ವೈಭವವನ್ನು ಕೂಡ ಸೆರೆಹಿಡಿಯಲಾಗಿದೆ.

ನಿರ್ದೇಶಕ ರಘು ಭಟ್ ಮಾತನಾಡಿ, ಈ ಹಾಡಿಗಾಗಿ ಸುಮಾರು ಎಂಟು ತಿಂಗಳ ಕಾಲ ಶ್ರಮ ವಹಿಸಲಾಗಿದೆ ಎಂದು ಹೇಳಿದರು. ಮಂತ್ರಾಲಯದ ನೈಜ ವಾತಾವರಣವನ್ನು ಉಳಿಸಿಕೊಂಡು ಚಿತ್ರೀಕರಣ ಮಾಡಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಮಠದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳನ್ನು ಹಾಡಿನ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು. ರಾಯರ ಭಕ್ತನಾಗಿ ಈ ಕೆಲಸ ಮಾಡಿರುವುದಾಗಿ ತಿಳಿಸಿ, ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಟಿ.ಎನ್.ಐ.ಟಿ ವತಿಯಿಂದ ನೀಡಲಾಗುವ ಮೊದಲ ಮೀಡಿಯಾ ಅವಾರ್ಡ್ ಅನ್ನು ಶ್ರೀಸುಬುಧೇಂದ್ರ ತೀರ್ಥರಿಗೆ ಪ್ರದಾನ ಮಾಡಲಾಯಿತು. ಶ್ರೀಗಳು ಪೂರ್ವಾಶ್ರಮದಲ್ಲಿ ಪತ್ರಕರ್ತರಾಗಿದ್ದ ಹಿನ್ನೆಲೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ರಘು ಭಟ್ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ನೆನಪಿರಲಿ ಪ್ರೇಮ್, ಗಿರಿಜಾ ಲೋಕೇಶ್, ತಾರಾ ಅನುರಾಧ, ಸುಧಾರಾಣಿ, ಮಾನ್ವಿತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
