Cinema News
ನಗುವಿನ ರಸದೌತಣಕ್ಕೆ ಸಜ್ಜಾದ ‘ಗೋಲ್ಮಾಲ್ ಗ್ಯಾಂಗ್’; ಟೀಸರ್ ಬಿಡುಗಡೆ

ಮನರಂಜನೆಗೆ ಆದ್ಯತೆ ನೀಡುವ ಸಿನಿಪ್ರಿಯರಿಗಾಗಿ ಮತ್ತೊಂದು ಕಾಮಿಡಿ ಎಂಟರ್‌ಟೈನರ್ ಸಿದ್ಧವಾಗುತ್ತಿದೆ. ‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕೆ. ಸತೀಶ್ ಚಂದ್ರ ಎಲೆಕೆರೆ ನಿರ್ಮಿಸಿರುವ ಈ ಚಿತ್ರವನ್ನು ಶಿವಕುಮಾರ್ ನಿರ್ದೇಶಿಸಿದ್ದಾರೆ. ಬಿಡುಗಡೆಯಾದ ಟೀಸರ್‌ನಲ್ಲಿ ಹಾಸ್ಯ, ಗೊಂದಲ ಮತ್ತು ಮನರಂಜನೆಯ ಅಂಶಗಳು ಮಿಳಿತಗೊಂಡಿದ್ದು, ಸಂಪೂರ್ಣ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಎಂಬ ಭರವಸೆ ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಿವಕುಮಾರ್, ಚಿತ್ರದ ನಿರ್ಮಾಣದಲ್ಲಿ ನಿರ್ಮಾಪಕರು ನೀಡಿದ ಬೆಂಬಲವನ್ನು ಸ್ಮರಿಸಿದರು. ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದ ಅವರು, ತಪ್ಪುಗಳನ್ನು ತಿದ್ದುತ್ತಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು. ಚಿತ್ರದಲ್ಲಿ 16ಕ್ಕೂ ಹೆಚ್ಚು ಪ್ರಮುಖ ಪಾತ್ರಗಳಿದ್ದು, ಪ್ರತಿಯೊಂದು ಪಾತ್ರವೂ ಕಥೆಯಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಹಲವು ಗೊಂದಲಗಳು ಮತ್ತು ಮನರಂಜನಾತ್ಮಕ ಘಟನೆಗಳ ಸುತ್ತ ಕಥೆ ಸಾಗುವುದರಿಂದ ‘ಗೋಲ್ಮಾಲ್ ಗ್ಯಾಂಗ್’ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನಿರ್ಮಾಪಕ ಕೆ. ಸತೀಶ್ ಚಂದ್ರ ಎಲೆಕೆರೆ ಮಾತನಾಡಿ, ಹಲವು ವರ್ಷಗಳಿಂದ ಸಿನಿಮಾ ಕ್ಷೇತ್ರದೊಂದಿಗೆ ವಿವಿಧ ರೀತಿಯಲ್ಲಿ ಸಂಪರ್ಕ ಹೊಂದಿದ್ದ ತಮ್ಮ ತಂಡ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದೆ ಎಂದು ಹೇಳಿದರು. ನಿರುದ್ಯೋಗ ಸಮಸ್ಯೆಗೆ ಸಾಧ್ಯವಾದ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಆಶಯದಿಂದ ಬ್ಯಾನರ್ ಆರಂಭಿಸಿದ್ದು, ಸಿನಿಮಾ ಮೂಲಕ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ನಾಯಕ ನಟ ಕಾರ್ತಿಕ್, ತಮ್ಮ ಮೇಲೆ ನಿರ್ಮಾಪಕರು ಇಟ್ಟ ನಂಬಿಕೆ ಜೀವನದ ಪ್ರಮುಖ ಕ್ಷಣವಾಗಿತ್ತು ಎಂದು ಹೇಳಿಕೊಂಡರು. ನಾಯಕ ನಟಿಯಾಗಿ ಆರಾಧನಾ ಭಟ್ ಅಭಿನಯಿಸಿದ್ದು, ಚಿತ್ರದ ಕಥೆಯಲ್ಲಿ ತಾವು ಯಾವ ತಂಡದ ಭಾಗವಾಗುತ್ತಾರೆ ಎಂಬುದು ಕುತೂಹಲಕಾರಿ ತಿರುವಾಗಿರಲಿದೆ ಎಂದು ತಿಳಿಸಿದರು. ಹಿರಿಯ ನಟ ಮಂಡ್ಯ ರಮೇಶ್ ಅವರೊಂದಿಗೆ ಕೆಲಸ ಮಾಡಿದ ಅನುಭವ ವಿಶೇಷವಾಗಿತ್ತು ಎಂದ ಅವರು, ಅವರ ಮಾರ್ಗದರ್ಶನದಿಂದ ತಮ್ಮ ಪಾತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು. ಚಿತ್ರವು ನಗು, ಮನರಂಜನೆ ಮತ್ತು ಕುಟುಂಬದೊಂದಿಗೆ ಕಳೆಯುವ ಉತ್ತಮ ಕ್ಷಣಗಳನ್ನು ನೀಡಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
