Television News
ಪ್ರೈಮ್ ಟೈಮ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾದ ‘ಅಗ್ನಿಸಾಕ್ಷಿ’

ಕನ್ನಡ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ ಇದೀಗ ಹೊಸ ರೂಪದಲ್ಲಿ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೌಟುಂಬಿಕ ಮನರಂಜನೆಯ ಪ್ರಮುಖ ವಾಹಿನಿಯಾದ ಕಲರ್ಸ್ ಕನ್ನಡ, ಜೂನ್ 8ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿರುವ ಈ ಹೊಸ ಧಾರಾವಾಹಿಯನ್ನು ಪರಿಚಯಿಸುತ್ತಿದೆ. ಈ ಬಾರಿ ಕಥೆ ಸಂಪೂರ್ಣ ಹೊಸದಾಗಿದ್ದು, ಹಳೆಯ ಧಾರಾವಾಹಿಯ ಮುಂದುವರಿದ ಭಾಗವಲ್ಲ ಎಂಬುದು ವಿಶೇಷ.
ಇಂದಿನ ಯುವಜನತೆಯ ಭಾವನೆಗಳು, ಅಹಂಕಾರ ಮತ್ತು ಆತ್ಮಗೌರವದ ನಡುವಿನ ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಸಾಗಲಿದೆ. “ಒಟ್ಟಿಗೆ ಇದ್ದರೆ ಜಗಳ, ದೂರವಾದರೆ ಬದುಕೇ ಕಷ್ಟ” ಎನ್ನುವಂತಹ ವಿಭಿನ್ನ ಪ್ರೇಮ ಸಂಬಂಧದ ಸುತ್ತ ಹೆಣೆಯಲಾದ ಈ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ.

ನಾಯಕ ಅಗ್ನಿ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ನಟಿಸುತ್ತಿದ್ದು, ಸಂಪತ್ತು ಮತ್ತು ಗರ್ವದಿಂದ ಕೂಡಿದ ಹಠಮಾರಿ ಉದ್ಯಮಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದೆಡೆ, ಆತ್ಮಗೌರವಕ್ಕೆ ಮೊದಲ ಆದ್ಯತೆ ನೀಡುವ ಧೈರ್ಯಶಾಲಿ ಯುವತಿ ಸಾಕ್ಷಿ ಪಾತ್ರದಲ್ಲಿ ವರ್ಷಿಣಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಸಂಪೂರ್ಣ ವಿಭಿನ್ನ ಮನಸ್ಥಿತಿಯ ಈ ಇಬ್ಬರ ಜೀವನ ಹೇಗೆ ಒಂದಾಗುತ್ತದೆ ಎಂಬ ಕುತೂಹಲವೇ ಧಾರಾವಾಹಿಯ ಪ್ರಮುಖ ಆಕರ್ಷಣೆ.

ಹಿಟ್ ಧಾರಾವಾಹಿ ‘ಅಗ್ನಿಸಾಕ್ಷಿ’ಯ ಬರಹಗಾರ ಹ್ಯಾರಿಸ್ ಅವರೇ ಈ ಹೊಸ ಕಥೆಯನ್ನು ರಚಿಸಿದ್ದು, ಭವ್ಯ ಮೇಕಿಂಗ್ ಹಾಗೂ ಶ್ರೀಮಂತ ದೃಶ್ಯ ವೈಭವದೊಂದಿಗೆ ಧಾರಾವಾಹಿ ಮೂಡಿಬಂದಿದೆ. ಬಾಂಧವ್ಯಗಳು, ಭಾವನೆಗಳು ಮತ್ತು ಸಂಬಂಧಗಳ ಹೊಸ ಆಯಾಮವನ್ನು ತೆರೆದಿಡಲಿರುವ ‘ಅಗ್ನಿಸಾಕ್ಷಿ’ ಜೂನ್ 8ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
