Cinema News
ತುಮಕೂರಿನಲ್ಲಿ ಭರ್ಜರಿಯಾಗಿ ಅನಾವರಣಗೊಂಡ “ಬೃಂದಾವಿಹಾರಿ” ಚಿತ್ರದ “ರಾಧಾ ರಾಧಾ” ಹಾಡು

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ ಎರಡನೇ ಹಾಡು “ರಾಧಾ ರಾಧಾ” ಇತ್ತೀಚೆಗೆ ತುಮಕೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಸಮೃದ್ಧಿ ವಿ ಮಂಜುನಾಥ್ ನಿರ್ಮಿಸಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶಿಸಿರುವ ಈ ಚಿತ್ರದ ಹಾಡನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅನಾವರಣಗೊಳಿಸಿದರು.
ಡಾ|| ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಹಾಡಿರುವ ಈ ರೊಮ್ಯಾಂಟಿಕ್ ಗೀತೆಯಲ್ಲಿ ಗಣೇಶ್ ಹಾಗೂ ದೇವಿಕಾ ಭಟ್ ಜೋಡಿ ಮೆರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾದ “ರಾಧಾ ರಾಧಾ” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಹೆಚ್ಚಿನ ವೀಕ್ಷಣೆ ಗಳಿಸುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ್, ತುಮಕೂರಿನೊಂದಿಗೆ ತಮ್ಮ ಹಳೆಯ ನಂಟನ್ನು ನೆನಪಿಸಿಕೊಂಡರು. “ನಾನು ನೆಲಮಂಗಲದಲ್ಲಿ ಓದಿದ್ದು, ಆಗಾಗ ತುಮಕೂರಿಗೆ ಬರುತ್ತಿದ್ದೆ. ಈಗ ನನ್ನ ಚಿತ್ರದ ಹಾಡು ಇದೇ ಊರಲ್ಲಿ ಬಿಡುಗಡೆಯಾಗಿರುವುದು ಸಂತಸದ ವಿಷಯ. ನಾಯಕನಾಗಿ ಇಪ್ಪತ್ತು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ನನ್ನ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು. “ಕಾಮಿಡಿ ಟೈಮ್” ಕಾರ್ಯಕ್ರಮದ ಮೂಲಕ ಅವಕಾಶ ನೀಡಿದ ಉದಯ ಟಿವಿಗೆ ವಿಶೇಷ ಧನ್ಯವಾದ ತಿಳಿಸಿದರು. ಮೊದಲ ಹಾಡು “ರಾಮ ರಾಮ” ಯಶಸ್ಸಿನ ಬಳಿಕ “ರಾಧಾ ರಾಧಾ” ಕೂಡ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, “ಬೃಂದಾವಿಹಾರಿ” ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಉಳಿದ ಹಾಡುಗಳೂ ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದರು. ನಿರ್ಮಾಪಕ ಸಮೃದ್ಧಿ ಮಂಜುನಾಥ್, ತಮ್ಮ ಸಂಸ್ಥೆಯ ನಾಲ್ಕನೇ ನಿರ್ಮಾಣವಾಗಿರುವ ಈ ಚಿತ್ರದ ಹಾಡು ತುಮಕೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.
ಇದು ತಮ್ಮ ಮೊದಲ ಸಿನಿಮಾ ಎಂದು ಹೇಳಿದ ನಾಯಕಿ ದೇವಿಕಾ ಭಟ್, ಗಣೇಶ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಸಂತಸವಾಗಿದೆ ಎಂದರು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ “ಬೃಂದಾವಿಹಾರಿ” ಚಿತ್ರಕ್ಕೆ ಶ್ರೀನಿವಾಸರಾಜು ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣವಿದ್ದು, ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ನಾಯಕಿಯರಾಗಿ ಅಭಿನಯಿಸಿದ್ದಾರೆ.
