News
ಶೈಲಜಾ ನಾಗ್ -ಬಿ ಸುರೇಶ್ ದಂಪತಿಯ ಪುತ್ರಿ ಚಂದನಾ ನಾಗ್ ರಂಗಪ್ರವೇಶ
 
																								
												
												
											 
ನಟನೆ, ನಿರ್ಮಾಣ, ನಿರ್ದೇಶನ, ರಂಗಭೂಮಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಬಿ ಸುರೇಶ ಮತ್ತು ನಟಿ, ನಿರ್ಮಾಪಕಿ ಶೈಲಜಾ ನಾಗ್ ಅವರ ಪುತ್ರಿ ಚಂದನಾ ಎಸ್ ನಾಗ್ ಈಗ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನಾಟ್ಯಶಾಲೆಯಲ್ಲಿ ಕಲಿಯುತ್ತಿರುವ ಚಂದನಾ ಎಸ್. ನಾಗ್, ಇದೇ ಏಪ್ರಿಲ್ 20ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿನ ADA ರಂಗಮಂದಿರದಲ್ಲಿ, ಸಂಜೆ 5:30ಕ್ಕೆ ರಂಗಪ್ರವೇಶ ಮಾಡಲಿದ್ದಾರೆ.

ಈ ವಿಶೇಷ ಕಾರ್ಯಕ್ರಮಕ್ಕೆ ನೂಪುರ ಸ್ಕೂಲ್ ಆಫ್ ಭರತನಾಟ್ಯಂನ ನಿರ್ದೇಶಕಿ ಗುರು ಡಾ. ಲಲಿತಾ ಶ್ರೀನಿವಾಸನ್, ಪದ್ಮಶ್ರೀ ಶ್ರೀಮತಿ ಪ್ರತಿಭಾ ಪ್ರಹ್ಲಾದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗುರು ಶ್ರೀಮತಿ ಶುಭಾ ಧನಂಜಯ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಚಂದನಾ ಎಸ್ ನಾಗ್ ಕುರಿತು :
ನಟಿಯಾಗಿ, ಬರಹಗಾರ್ತಿಯಾಗಿ, ನೃತ್ಯಗಾರ್ತಿಯಾಗಿ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿರುವ ಚಂದನಾ, ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವಿಷುಯಲ್ ಕಮ್ಯೂನಿಕೇಷನ್ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಅಜ್ಜಿಯಂದಿರಾದ ಕಮಲಾ ರಾಧಾಕೃಷ್ಣ ಮತ್ತು ವಿಜಯಾ ಅವರ ಮಾರ್ಗದರ್ಶನದಲ್ಲಿ ಬದುಕಿನ ಪಟ್ಟುಗಳನ್ನು ಕಲಿತ ಚಂದನಾ, ಅಪ್ಪ ಅಮ್ಮನಂತೆ ಸಿನಿಮಾ ಮತ್ತು ಕಿರುತೆರೆಯ ಆಳ ಅಗಲವನ್ನೂ ಅರಿತಿದ್ದಾರೆ.

ಬೆಂಗಳೂರಿನ ಸಂಚಯ, ಸಮುದಾಯ ಮತ್ತು ಬೆಂಗಳೂರು ಪ್ಲೇಯರ್ಸ್ ಸೇರಿ ಹಲವು ರಂಗತಂಡಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ನಾಟಕ ಬೆಂಗಳೂರು ಫೆಸ್ಟಿವಲ್‌ನಲ್ಲಿ ಚಂದನಾ ಬರೆದ “ಕಿಂಟ್ಸುಗಿ” ನಾಟಕವು ಅತ್ಯುತ್ತಮ ಮೂಲ ನಾಟಕ ಕೃತಿ ಎಂಬ ಪ್ರಶಸ್ತಿ ಪಡೆದಿದೆ. ಮೊದಲನೆಯ ಅಧ್ಯಾಯ, ಬ್ಲಡಿ ಡೊಮಿನೊ, ಸದ್ಗತಿ, ಅನ್‌ವಾಂಟೆಡ್ ಕಿಡ್, ಪಂಜರದ ಗಿಳಿ ಸೇರಿ ಇನ್ನೂ ಹಲವು ಕಿರುಚಿತ್ರಗಳಲ್ಲಿಯೂ ನಟಿಸಿದ ಅನುಭವ ಇದೆ. ಈ ಕಿರುಚಿತ್ರಗಳು ಹಲವು ಸಿನಿಮೋತ್ಸವಗಳಲ್ಲಿಯೂ ಪ್ರದರ್ಶನ ಕಂಡಿವೆ. 2021ರಲ್ಲಿ ಪ್ರಗುಣಿ ಶಾರ್ಟ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಪಡೆದಿದ್ದಾರೆ. ಯಜಮಾನ ಮತ್ತು ಕ್ರಾಂತಿ ಸಿನಿಮಾಗಳಲ್ಲಿ ನಿರ್ದೇಶನ ತಂಡದಲ್ಲಿ ಸಹಾಯಕಿ ಆಗಿಯೂ ಕೆಲಸ ಮಾಡಿದ್ದಾರೆ.

ನೃತ್ಯಾನುಭವ :
ಗುರು ಭಾನುಮತಿ ಅವರ ಬಳಿ ಸರಿಸುಮಾರು ಒಂದು ದಶಕದ ಕಾಲ ಭರತನಾಟ್ಯ ಕಲಿತ ಚಂದನಾ ನಂತರ ಗುರು ಸ್ನೇಹಾ ಕಪ್ಪಣ್ಣ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಹಂಪಿ ಉತ್ಸವ, ಹೊಸೂರು ನಾಟ್ಯಾಂಜಲಿ, ಶೃಂಗೇರಿ ಮಠ ಸೇರಿದಂತೆ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿಯೂ ಚಂದನಾ ಅವರು ನೃತ್ಯ ಪ್ರದರ್ಶನ ನೀಡಿದ್ದಾರೆ.
ಅವರು ಕರ್ನಾಟಕ ಶಿಕ್ಷಣ ಮಂಡಳಿಯ ಸೀನಿಯರ್ ಪರೀಕ್ಷೆ ಮತ್ತು ಪುಣೆಯ ಗಂಧರ್ವ ಮಂಡಳಿಯ ವಿಶಾರದ್ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಿದ್ದಾರೆ.
2024 ರಿಂದ “ಸಹಚಾರಿ” ಎಂಬ ಭರತನಾಟ್ಯ ತಂಡದೊಂದಿಗೆ ಕರ್ನಾಟಕದಾದ್ಯಂತ ಸಾಂವಿಧಾನಿಕ ಮೌಲ್ಯಗಳನ್ನು ನೃತ್ಯದ ಮೂಲಕ
ಪ್ರಚಾರ ಮಾಡುತ್ತಿದ್ದಾರೆ.

 
 
																	
																															 
			 
											 
											 
											 
											 
											 
											 
											 
											