Cinema News
“ಸಮೃದ್ಧಿ ರಂಗತಂಡ”ಕ್ಕೆ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ತನಿಷಾ ಕುಪ್ಪಂಡ ಚಾಲನೆ
 
																								
												
												
											 
ಚಿತ್ರರಂಗ, ರಂಗಭೂಮಿ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಕಲಾವಿದ, ತಂತ್ರಜ್ಞರಾಗಲು, ಅದಕ್ಕೆ ಸೂಕ್ತ ತರಬೇತಿ ಪಡೆಯುವುದು ಅವಶ್ಯಕ. ಹಾಗೆ ಮನರಂಜನಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕೆನ್ನುವವರಿಗೆ ತರಬೇತಿ, ಮಾರ್ಗದರ್ಶನ ನೀಡಲೆಂದೇ ನಗರದಲ್ಲಿ ಸಮೃದ್ಧಿ ರಂಗತಂಡ ಪ್ರಾರಂಭವಾಗಿದೆ.

ಜಾಲಹಳ್ಳಿ, ಬಾಣಾವರ, ಹೆಸರುಘಟ್ಟ, ನೆಲಮಂಗಲ, ಯಶವಂತಪುರ, ಮತ್ತೀಕೆರೆ ಸುತ್ತಮುತ್ತಲಿನ ಸಿನಿಮಾಸಕ್ತರಿಗಾಗಿಯೇ ಸಮೃದ್ಧಿ ರಂಗತಂಡದ ಚಂದನ್ ಬಿ. ಹಾಗೂ ನೇತ್ರಾವತಿ ಚಂದನ್ ಅವರು ಚಿಕ್ಕಬಾಣಾವರದ ಆಚಾರ್ಯ ಕಾಲೇಜ್ ರಸ್ತೆಯ ಶಾಂತಿನಗರ ಆರ್ಚ್ ಬಳಿ “ಸಮೃದ್ಧಿ ರಂಗತಂಡ” ಎಂಬ ತರಬೇತಿ ಸಂಸ್ಥೆಯನ್ನು ತೆರೆದಿದ್ದಾರೆ.

‘ಕಲೆ ಕಲಿಯಿರಿ’ ಎಂಬ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಈ ಸಂಸ್ಥೆಯ ಲೋಗೋವನ್ನು ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ಅನಾವರಣಗೊಳಿಸಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ವೆಬ್ ಸೈಟ್ ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ ಬಹಳ ದಿನಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದು, ಮಲ್ಟಿ ಟ್ಯಾಲೆಂಟ್ ಹೊಂದಿರುವ ಚಂದನ್ ಗೆ ಒಳ್ಳೇ ಫ್ಯೂಚರ್ ಇದೆ, ಈಗ ಈ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ, ಅವರಿಗೆ ತಂದೆ, ತಾಯಿ ಸೇರಿ ಇಡೀ ಕುಟುಂಬವೇ ಬೆಂಬಲವಾಗಿ ನಿಂತಿದೆ. ಇದರಿಂದ ಈ ಭಾಗದ ಸಿನಿಮಾಸಕ್ತರಿಗೆ ತುಂಬಾ ಅನುಕೂವಾಗಲಿದೆ ಎಂದು ಹೇಳಿದರು.
ನಟಿ ತನಿಷಾ ಕುಪ್ಪಂಡ ಮಾತನಾಡಿ ನೇತ್ರಾವತಿ, ಚಂದನ್ ಅವರ ಈ ಪ್ರಯತ್ನಕ್ಕೆ ಒಳ್ಳೇದಾಗಲಿ, ಸಮೃದ್ದಿ ಎಂಬ ಹೆಸರಲ್ಲೇ ಒಂದು ಬೆಳವಣಿಗೆ ಇದೆ. ಈ ಸಂಸ್ಥೆಯಿಂದ ಒಳ್ಳೊಳ್ಳೆ ಪ್ರತಿಭೆಗಳು ಹೊರಬರಲಿ ಎಂದು ಶುಭ ಹಾರೈಸಿದರು. ಸಮೃದ್ಧಿ ರಂಗತಂಡದ ಚಂದನ್ ಬಿ. ಮಾತನಾಡಿ ನಮ್ಮಲ್ಲಿ ಸಿನಿಮಾ, ರಂಗಭೂಮಿಯಲ್ಲಿ ಅಭಿನಯ, ಫೋಟೋಗ್ರಫಿ, ಎಡಿಟಿಂಗ್ ಸೇರಿದಂತೆ ಹಲವಾರು ವಿಭಾಗಗಳಲ್ಲಿ ನಾವು ತರಬೇತಿ ನೀಡುತ್ತೇವೆ. ಪ್ರತಿಭೆ ಇರೋರಿಗೆ ಸೂಕ್ತ ರೀತಿಯಲ್ಲಿ ತಯಾರು ಮಾಡಬೇಕೆನ್ನುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ಹೇಳಿದರು.

 
 
																	
																															 
			 
											 
											 
											 
											 
											 
											 
											 
											