Cinema News
ವಿನಯ್ ರಾಜ್‌ಕುಮಾರ್ ಹೊಸ ಅವತಾರದಲ್ಲಿ ‘ಗ್ರಾಮಾಯಣ’; ಜುಲೈ 3ಕ್ಕೆ ತೆರೆಗೆ ಬರಲು ಸಜ್ಜು
ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ ‘ಗ್ರಾಮಾಯಣ’ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ ಮತ್ತು ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಜುಲೈ 3ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
‘ಗ್ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ದುನಿಯಾ ವಿಜಯ್, ನಾಗರಾಜ್ ವಸ್ತಾರೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ರಾಘವೇಂದ್ರ ರಾಜ್‌ಕುಮಾರ್, ಮಂಗಳ ರಾಘವೇಂದ್ರ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯುವ ರಾಜ್‌ಕುಮಾರ್, ನವೀನ್ ಶಂಕರ್, ಸಿಂಪಲ್ ಸುನಿ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟ್ರೇಲರ್ ವೀಕ್ಷಿಸಿದ ಬಳಿಕ ಮಾತನಾಡಿದ ದುನಿಯಾ ವಿಜಯ್, ವಿನಯ್ ರಾಜ್‌ಕುಮಾರ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವನೂರು ಚಂದ್ರು ಉತ್ತಮ ನಿರ್ದೇಶಕರಾಗಿದ್ದು, ಅವರನ್ನು ತಾನು ಎರಡನೇ ಸೂರಿ ಎಂದು ಕರೆಯುವುದಾಗಿ ಹೇಳಿದರು. ಇದೇ ವೇಳೆ ನಾಗರಾಜ್ ವಸ್ತಾರೆ ಕೂಡ ‘ಗ್ರಾಮಾಯಣ’ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಟ ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಚಿತ್ರಕ್ಕೆ ಶುಭ ಕೋರಿದರು. ನಿರ್ಮಾಪಕ ನವೀನ್ ಮನೋಹರ್, ನಾಯಕ ವಿನಯ್ ರಾಜ್‌ಕುಮಾರ್, ನಿರ್ದೇಶಕ ದೇವನೂರು ಚಂದ್ರು ಹಾಗೂ ನಟಿ ಮೇಘ ಶೆಟ್ಟಿ ಚಿತ್ರದ ಬಗ್ಗೆ ಮಾತನಾಡಿದರು. ವಿನಯ್ ರಾಜ್‌ಕುಮಾರ್ ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರೆ, ನಿರ್ದೇಶಕ ದೇವನೂರು ಚಂದ್ರು ‘ಕೊಟ್ಟ ದುಡ್ಡಿಗೆ ಮೋಸವಾಗದ ಸಿನಿಮಾ’ ಎಂದು ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.