Cinema News
ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಮಿಂಚುತ್ತಿರುವ “ರುದ್ರಾಭಿಷೇಕಂ”
ವೀರಗಾಸೆ ಎಂಬ ನಮ್ಮ ನಾಡಿನ ಪಾರಂಪರಿಕ ಕಲೆಯ ಹಿನ್ನೆಲೆಯೊಂದಿಗೆ ಮೂಡಿಬಂದಿರುವ “ರುದ್ರಾಭಿಷೇಕಂ” ಚಿತ್ರ ಇದೀಗ ಮತ್ತೊಮ್ಮೆ ಗಮನ ಸೆಳೆದಿದೆ. ವಸಂತ್ ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಪ್ರಿಯಾಂಕಾ ತಿಮ್ಮೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಹೃದಯಸ್ಪರ್ಶಿ ಹಾಡೊಂದನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಕೆ. ವೆಂಕಟೇಶ್, ವಿಜಯಪುರದ ಸ್ನೇಹಿತರ ತಂಡವಾಗಿ ಈ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾಗಿ ಹೇಳಿದರು. ನಿರ್ದೇಶಕ ವಸಂತ್ ಕುಮಾರ್ ಹೇಳಿದ ಕಥೆ ಇಷ್ಟವಾಗಿ ಸಿನಿಮಾ ಆರಂಭಿಸಿದ್ದಾಗಿ ತಿಳಿಸಿದರು. ನಾಯಕ ವಿಜಯ ರಾಘವೇಂದ್ರ ಆರಂಭದಿಂದಲೇ ಸಂಪೂರ್ಣ ಸಹಕಾರ ನೀಡಿದ್ದು, ಸಲಹೆ ಸೂಚನೆಗಳ ಮೂಲಕ ಚಿತ್ರಕ್ಕೆ ಬೆಂಬಲವಾಗಿದ್ದರು ಎಂದರು. ಬಲ ರಾಜವಾಡಿ ಅಭಿನಯಿಸಿದ ಗೌಡರ ಪಾತ್ರ ವಿಶೇಷವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ವಿಜಯ ರಾಘವೇಂದ್ರ ಮಾತನಾಡಿ, ವೀರಗಾಸೆ ಕಲಾವಿದನ ಪಾತ್ರ ನಿರ್ವಹಿಸುವುದು ಸವಾಲಿನ ಕೆಲಸವಾಗಿತ್ತು ಎಂದರು. ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರವನ್ನು ತುಂಬಾ ಮನಸಾರೆ ಅನುಭವಿಸಿ ಅಭಿನಯಿಸಿದ್ದಾಗಿ ಹೇಳಿದರು. ನಟಿ ಪ್ರಿಯಾಂಕಾ ತಿಮ್ಮೇಶ್, ಶಿವಭಕ್ತೆಯಾಗಿ ಜೊತೆಗೆ ಹಳ್ಳಿ ಮತ್ತು ನಗರ ಯುವತಿಯ ಎರಡು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು. ಸಂಗೀತ ನಿರ್ದೇಶಕ ವಿ. ಮನೋಹರ್, ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಹಾಡುವ ಅವಕಾಶ ನೀಡಿರುವುದಾಗಿ ಹೇಳಿದರು.
“ರುದ್ರಾಭಿಷೇಕಂ” ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್‌ನ ಮೊದಲ ಚಿತ್ರವಾಗಿದ್ದು, ಒಂಬತ್ತು ಮಂದಿ ನಿರ್ಮಾಪಕರು ಸೇರಿ ಚಿತ್ರ ನಿರ್ಮಿಸಿದ್ದಾರೆ. ದೇವನಹಳ್ಳಿ ಸುತ್ತಮುತ್ತ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರು ಸೇರಿದಂತೆ ಅಪರೂಪದ ಲೊಕೇಶನ್‌ಗಳಲ್ಲಿ 50ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ವೀರಭದ್ರ ದೇವರ ಇತಿಹಾಸ ಹಾಗೂ ವೀರಗಾಸೆ ಕಲೆಯ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಸಿನಿಮಾ ರೂಪುಗೊಂಡಿದೆ. ಚಿತ್ರದಲ್ಲಿ ಬಲ ರಾಜವಾಡಿ, ಮಮತಾ ತುರುವೇಕೆರೆ, ನವನೀತಾ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದು, ವಿ. ಮನೋಹರ್ ಸಂಗೀತ ಮತ್ತು ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.