Cinema News

ಚೌಡೇಶ್ವರಿ ಜಾತ್ರೆಯ ಕಥೆ ಹೇಳಲು ಬರುತ್ತಿದೆ ‘ಊರಬ್ಬ’; ಟ್ರೈಲರ್ ಬಿಡುಗಡೆ

Published

on

ಮಾಗಡಿ ತಾಲ್ಲೂಕಿನ ಪ್ರಸಿದ್ಧ ಉಜ್ಜಿನಿ ಚೌಡೇಶ್ವರಿ ಜಾತ್ರೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ‘ಊರಬ್ಬ’ ಚಿತ್ರದ ಟ್ರೈಲರ್ ಇತ್ತೀಚೆಗೆ ಅನಾವರಣಗೊಂಡಿತು. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ ಹಾಗೂ ಸಿದ್ದು ಮೂಲಿಮನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಲಕ್ಕಿ ಶಂಕರ್ ನಿರ್ದೇಶನ ಮಾಡಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

 

ಚಿತ್ರದ ವಿಶೇಷವೆಂದರೆ, ನೈಜ ಜಾತ್ರೆಯ ದೃಶ್ಯಗಳನ್ನು ನೇರವಾಗಿ ಚಿತ್ರೀಕರಿಸಿರುವುದು. ಎಂ.ಡಿ. ಶ್ರೀಧರ್, ಹೆಚ್. ವಾಸು, ಎ.ವಿ. ಕೃಷ್ಣಕುಮಾರ್, ಬಾಹುಬಲಿ ಮತ್ತು ಈಶ್ವರ್ ಸೇರಿದಂತೆ ಐವರು ತಾಂತ್ರಿಕರು ಒಟ್ಟು ಎಂಟು ಕ್ಯಾಮೆರಾಗಳನ್ನು ಬಳಸಿ ಜಾತ್ರೆಯ ವೈಭವವನ್ನು ಸೆರೆಹಿಡಿದಿದ್ದಾರೆ. ಹೆಚ್. ವಾಸು ಮಾತನಾಡಿ, ಜಾತ್ರೆಯಲ್ಲಿ ಕಂಡ ಕೆಲವು ಸಾಮಾಜಿಕ ಅಂಶಗಳನ್ನು ಕಥೆಯ ರೂಪಕ್ಕೆ ತಂದು ಎಲ್ಲರೂ ಸೇರಿ ಸಂಭಾಷಣೆಗಳನ್ನು ರಚಿಸಿದ್ದೇವೆ ಎಂದು ತಿಳಿಸಿದರು.

 

 

 

 

ನಿರ್ದೇಶಕ ಲಕ್ಕಿ ಶಂಕರ್ ಮಾತನಾಡಿ, ಚೌಡೇಶ್ವರಿ ದೇವಿಯ ಮೇಲಿನ ಭಕ್ತಿಯೇ ಈ ಚಿತ್ರವನ್ನು ಮಾಡಿಸಲು ಪ್ರೇರಣೆ ನೀಡಿದೆ ಎಂದರು. ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ತಮಗೆ ಈ ಕಥಾವಸ್ತು ಹೊಸ ಅನುಭವ ನೀಡಿದ್ದು, ಊರಿನ ಜನರ ಸಹಕಾರದಿಂದ ಜಾತ್ರೆಯ ನೈಜ ದೃಶ್ಯಗಳನ್ನು ಲೈವ್ ಆಗಿ ಚಿತ್ರೀಕರಿಸಿದ್ದೇವೆ ಎಂದು ಹೇಳಿದರು. ಭಾರತದಲ್ಲೇ ಇದೇ ಮೊದಲ ಪ್ರಯತ್ನವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

 

ನಿರ್ಮಾಪಕ ಹಾಗೂ ನಟ ನರೇಶ್ ಗೌಡ ಮಾತನಾಡಿ, ಈ ಸಿನಿಮಾ ರೂಪುಗೊಳ್ಳಲು ಲಕ್ಕಿ ಶಂಕರ್ ಪ್ರಮುಖ ಕಾರಣ ಎಂದು ಹೇಳಿದರು. ಜಾತ್ರೆಯ ಸಂಪ್ರದಾಯಗಳು, ಆಚರಣೆಗಳು ಹಾಗೂ ಗ್ರಾಮೀಣ ಬದುಕಿನ ಹಲವು ಅಂಶಗಳನ್ನು ಚಿತ್ರದಲ್ಲಿ ಒಳಗೊಂಡಿದ್ದು, ಸುಮಾರು 30ರಿಂದ 40 ಕಲಾವಿದರು ಅಭಿನಯಿಸಿದ್ದಾರೆ ಎಂದು ತಿಳಿಸಿದರು. ಚಿತ್ರದಲ್ಲಿ ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಮಿತ್ರ, ಡಾ. ನಂಜಪ್ಪ, ಅರವಿಂದ್ ರಾವ್ ಸೇರಿದಂತೆ ಹಲವರು ನಟಿಸಿದ್ದಾರೆ.

 

 

 

 

 

 

ಆಯುಷ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅಕ್ಷಯ್ ಎಸ್. ರಿಶಭ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಹಾಗೂ ಆರ್.ಡಿ. ರವಿ ಸಂಕಲನ ನೀಡಿದ್ದಾರೆ. ಗ್ರಾಮೀಣ ಸಂಸ್ಕೃತಿ ಮತ್ತು ಜಾತ್ರೆಯ ವೈಭವವನ್ನು ತೆರೆ ಮೇಲೆ ತರುವ ಈ ಚಿತ್ರಕ್ಕೆ ಈಗಾಗಲೇ ಟ್ರೈಲರ್ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Spread the love

Copyright © 2019 PopcornKannada.com