Cinema News
700 ವರ್ಷ ಹಿಂದಿನ ಕಥೆಗೆ ‘ಉಗ್ರಾಯುಧಮ್’ ರೂಪ; ಶ್ರೀಮುರಳಿ ಚಿತ್ರಕ್ಕೆ ಭರ್ಜರಿ ಶೂಟಿಂಗ್
ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. 700 ವರ್ಷಗಳ ಹಿಂದಿನ ಕಥಾಹಂದರ ಹೊಂದಿರುವ ಈ ಪಿರಿಯಾಡಿಕ್ ಡ್ರಾಮಾವನ್ನು ಜಯರಾಮ್ ದೇವಸಮುದ್ರ ಅವರು ಸುರಮ್ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಪುನೀತ್ ರುದ್ರನಾಗ್ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
‘ನಿದ್ರಾದೇವಿ ನೆಕ್ಸ್ಟ್ ಡೋರ್’ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಯರಾಮ್ ದೇವಸಮುದ್ರ, ಬಳಿಕ ‘ಎಲ್‌ಎಸ್‌ಡಿ’ ಹಾಗೂ ‘ನೀ ನಂಗೆ ಅಲ್ಲವಾ’ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈ ಎರಡೂ ಚಿತ್ರಗಳು ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ, ಇದೀಗ ಶ್ರೀಮುರಳಿ ಅಭಿನಯದ ಬೃಹತ್ ಬಜೆಟ್‌ನ ‘ಉಗ್ರಾಯುಧಮ್’ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅದ್ಧೂರಿ ತಾರಾಬಳಗದ ಈ ಸಿನಿಮಾ ಆರಂಭದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರದ ಒಳಾಂಗಣದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಕಲಾ ನಿರ್ದೇಶಕ ಅಮರ್ ಅವರು ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಸಿನಿಮಾ ಆಗಿರುವುದರಿಂದ ಬಹುತೇಕ ಚಿತ್ರೀಕರಣ ಹೊರಾಂಗಣದಲ್ಲಿ ನಡೆಯಲಿದ್ದು, ಮಳೆಗಾಲ ಮುಗಿದ ಬಳಿಕ ಚಿತ್ರತಂಡ ತೀರ್ಥಹಳ್ಳಿಯತ್ತ ತೆರಳಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಶ್ರೀಮುರಳಿ ಭಾಗವಹಿಸಿದ್ದು, 400ಕ್ಕೂ ಅಧಿಕ ಸಹ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ನಿರ್ದೇಶಕ ಪುನೀತ್ ರುದ್ರನಾಗ್ ಅವರೇ ಕಥೆ ಹಾಗೂ ಚಿತ್ರಕಥೆ ರಚಿಸಿದ್ದು, ಮಂಜು ಅಥರ್ವ ಬರವಣಿಗೆಯಲ್ಲಿ ಅವರಿಗೆ ಸಾಥ್ ನೀಡಿದ್ದಾರೆ. ಸಂಕೇತ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಈವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಹೊಸ ಲುಕ್ ಹಾಗೂ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ನಾಯಕಿ ಸೇರಿದಂತೆ ಚಿತ್ರದ ಉಳಿದ ತಾರಾಬಳಗದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಬಹಿರಂಗಪಡಿಸಲಿದೆ.