Cinema News
ಪ್ರಥಮ್ ಅಭಿನಯದ ‘ಫಸ್ಟ್ ನೈಟ್ ವಿತ್ ದೆವ್ವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರವು ಏಪ್ರಿಲ್ 3 ರಂದು ತೆರೆಗೆ ಬರುತ್ತಿದೆ
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಾಯಕನಾಗಿ ನಟಿಸಿರುವ, ಪಿ.ವಿ.ಆರ್. ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ ಬಹು ನಿರೀಕ್ಷಿತ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರ ಬಿಡುಗಡೆಯಕ್ಕೆ ಸಜ್ಜಾಗಿದೆ. ಈ ಸಿನಿಮಾ ಏಪ್ರಿಲ್ 3ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವೂ ಯಶಸ್ವಿಯಾಗಿ ನೆರವೇರಿತು. ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯನ್ನು ಪ್ರಥಮ್ ಅವರೇ ರಚಿಸಿದ್ದು, ಹಿರಿಯ ನಟ ಶ್ರೀನಿವಾಸಮೂರ್ತಿ ಟ್ರೇಲರ್‌ಗೆ ಚಾಲನೆ ನೀಡಿದರು.
ನಾಯಕ ಪ್ರಥಮ್ ಮಾತನಾಡಿ, ಚಿತ್ರದ ಡಬ್ಬಿಂಗ್ ಹಾಗೂ ಸ್ಯಾಟಲೈಟ್ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿರುವುದಾಗಿ ತಿಳಿಸಿದರು. ಮನರಂಜನೆಗೆ ಆದ್ಯತೆ ನೀಡಿದ ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ, ಮದುವೆಯಾದ ನಂತರ ತನ್ನ ಹೆಂಡತಿ ದೆವ್ವ ಎಂಬುದನ್ನು ಅರಿಯುವ ನಾಯಕನ ಕಥೆಯನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. “ಅವರ ಫಸ್ಟ್ ನೈಟ್ ನಡೆಯುತ್ತದೆಯೋ ಇಲ್ಲವೋ ಎನ್ನುವುದು ಚಿತ್ರದ ಕುತೂಹಲ,” ಎಂದರು.
ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಮಾತನಾಡಿ, ಪ್ರಥಮ್ ಒಳ್ಳೆಯ ಮಾತುಗಾರರಾದರೂ, ಈ ಚಿತ್ರದಲ್ಲಿ ಅವರ ಪಾತ್ರದಲ್ಲಿ ಸಂಭಾಷಣೆ ಕಡಿಮೆ ಇದೆ ಎಂದು ಹೇಳಿದರು. ಕನ್ನಡ ಚಿತ್ರರಂಗದಲ್ಲಿ ದೀರ್ಘಕಾಲದಿಂದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಅವರು, ಈ ಚಿತ್ರದಲ್ಲಿ ಛಾಯಾಗ್ರಹಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ 53ನೇ ಛಾಯಾಗ್ರಾಹಕತ್ವದ ಚಿತ್ರವಾಗಿದ್ದು, ನಿರ್ದೇಶಕರಾಗಿ ಐದನೇ ಸಿನಿಮಾ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಸೇರಿದಂತೆ ಹಲವರ ಪಾತ್ರಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.
ನಾಯಕಿ ನಿಖಿತಾ ಸ್ವಾಮಿ ಮಾತನಾಡಿ, ಇದು ಕಾಮಿಡಿ-ಹಾರರ್ ಚಿತ್ರವಾಗಿದ್ದು, ಪ್ರಥಮ್ ಅವರ ಪತ್ನಿಯಾಗಿ ಇನೋಸೆಂಟ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆಯಲ್ಲಿ ನನ್ನ ಪಾತ್ರದ ಬದಲಾವಣೆ ವಿಶೇಷವಾಗಿದ್ದು, ಎರಡು ವಿಭಿನ್ನ ಶೇಡ್ಸ್‌ನಲ್ಲಿ ನಟಿಸಿದ್ದೇನೆ ಎಂದರು.
ಹಿರಿಯ ನಟ ಶ್ರೀನಿವಾಸಮೂರ್ತಿ ತಮ್ಮ ಅನುಭವ ಹಂಚಿಕೊಂಡು, ಹಳೆಯ ಮತ್ತು ಇಂದಿನ ಕಾಲದ ನಟರೊಂದಿಗೆ ಕೆಲಸ ಮಾಡಿದರೂ ವಿಶೇಷ ಬದಲಾವಣೆ ಕಾಣಿಸಿಲ್ಲ ಎಂದು ಅಭಿಪ್ರಾಯಪಟ್ಟರು. ಮಿಮಿಕ್ರಿ ಗೋಪಿ ಹಾಸ್ಯಭರಿತವಾಗಿ ಮಾತನಾಡಿ, ಪ್ರಥಮ್ ಮತ್ತು ಸ್ವಾಮಿ ಇಬ್ಬರೂ ಸೇರಿ ಬೆಳಗಿನ ಜಾವದವರೆಗೂ ಕೆಲಸ ಮಾಡಿಸಿಕೊಂಡರು ಎಂದು ಹೇಳಿದರು.
ಅದ್ವಿಕ್ ವರ್ಮ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರೆತಿದೆ. ಹರೀಶ್ ರಾಜ್ ವಿಲನ್ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದು, ಸುಶ್ಮಿತಾ, ಜೀವಿತಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ತುಕಾಲಿ ಸಂತೋಷ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ನವೀನ್ ಮತ್ತು ಪುನೀತ್ ಕಾರ್ಯನಿರ್ವಹಿಸಿದ್ದಾರೆ.
ಚಿತ್ರದಲ್ಲಿ ತುಕಾಲಿ ಸಂತೋಷ್ ವಿದೇಶದಿಂದ ಬಂದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕನೊಂದಿಗೆ ಸಾಗುವ ಪಾತ್ರವಾಗಿದೆ. ಸುಶ್ಮಿತಾ ದೆವ್ವದ ರೂಪದಲ್ಲಿ ಪ್ರೇಕ್ಷಕರನ್ನು ಹೆದರಿಸಲಿದ್ದಾರೆ. ನಾಗೇಶ್ ನಾರಾಯಣ್ ಸಂಕಲನದ ಜೊತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಎರಡು ಸಾಹಸ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ.