Cinema News

ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರಿಂದ ಬಹು ನಿರೀಕ್ಷಿತ “45” ಚಿತ್ರದ “ಶಿವಂ ಶಿವಂ ಸನಾತನಂ” ಹಾಡು ಬಿಡುಗಡೆ .

Published

on

ಕರುನಾಡ ‌ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅರ್ಜುನ್ ಜನ್ಯ ಅವರೆ ಸಂಗೀತ ನೀಡಿರುವ “ಶಿವಂ ಶಿವಂ ಸನಾತನಂ” ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ದೂರದ ದೆಹಲಿಯಿಂದ ಆಗಮಿಸಿ ಶಿವನ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡದವನ್ನು ಆಶೀರ್ವದಿಸಿದರು. ಈ ಹಾಡಿಗೆ ಶಿವರಾಜಕುಮಾರ್ ಅವರು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಶಿವನ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ‌ಮಾತನಾಡಿದರು.‌

ಒತ್ತಡದ ಕಾರ್ಯಗಳಿದ್ದರೂ ದೂರದ ಊರಿನಿಂದ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಅನಂತ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ,‌ ನಮ್ಮ ಚಿತ್ರಕ್ಕೆ ಅರ್ಜುನ್ ಜನ್ಯ ಅವರಂತಹ ನಿರ್ದೇಶಕರು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದ ಆರಂಭದಿಂದಲೂ ಅವರು ಈ ಚಿತ್ರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ಶಿವನ ಕುರಿತಾದ ಹಾಡಂತೂ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಹಾಡು ಇಡೀ ದೇಶದೆಲ್ಲೆಡೆ ಸದ್ದು ಮಾಡಲಿದೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಮಧುರವಾಗಿದೆ. ಶಿವರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಇಡೀ ತಂಡಕ್ಕೆ ಧನ್ಯವಾದ ಎಂದರು.

ಶಿವನ ಕುರಿತಾದ ಈ ಹಾಡು ಬರೆದುಕೊಟ್ಟ ವಿ.ನಾಗೇಂದ್ರಪ್ರಸಾದ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ. ಈ ಹಾಡು ಹಾಗೂ ಚಿತ್ರ ಇಷ್ಟು ಚೆನ್ನಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಅವರೆ ಪ್ರಮುಖ ಕಾರಣ. ಇನ್ನೂ, ನಾನು ನಿರ್ದೇಶನ ಮಾಡಲು ಪ್ರೇರಣೆ ನೀಡಿದವರೆ ಶಿವರಾಜಕುಮಾರ್. ಅವರ ಪ್ರೋತ್ಸಾಹಕ್ಕೆ ನಾನು ಸದಾ ಚಿರ ಋಣಿ. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಸಹಕಾರ ಕೂಡ ಅಪಾರ. ಸದ್ಯದಲ್ಲೇ ನಮ್ಮ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಸಹ ಇದೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.

ಅರ್ಜುನ್ ಜನ್ಯ ಕರ್ನಾಟಕ ಮಾತ್ರ ಅಲ್ಲ ಇಡೀ ಭಾರತದಲ್ಲೇ ಉತ್ತಮ ನಿರ್ದೇಶಕನಾಗಿ ಹೆಸರು ಮಾಡುತ್ತಾರೆ. ಇಂದು ಬಿಡುಗಡೆಯಾಗಿರುವ ಶಿವನ ಹಾಡಂತೂ ಬಹಳ ಸೊಗಸಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ನಮ್ಮ ಕುಟುಂಬದವರ ಹಾಗೆ. ಕಳೆದ ವರ್ಷ ನಾನು ಈ ಚಿತ್ರದ (ಕನ್ನಡ) ಡಬ್ಬಿಂಗ್ ಮುಗಿಸಿದ್ದೆ. ಈಗ ತಮಿಳಿನಲ್ಲಿ ಡಬ್ ಮಾಡುತ್ತಿದ್ದೇನೆ. ಆದಷ್ಟು ಎಲ್ಲಾ ಭಾಷೆಗಳಲ್ಲೂ ನಾನೇ ಡಬ್ ಮಾಡುತ್ತೇನೆ‌. ನನ್ನ ಧ್ವನಿ ಎಲ್ಲಾ ಕಡೆ ತಲುಪಲಿ ಅಂತ ಅಷ್ಟೇ ಎಂದು ಶಿವರಾಜಕುಮಾರ್ ತಿಳಿಸಿದರು. ‌

ಹಾಡಿನ ಬಗ್ಗೆ ಡಾ||ವಿ.ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಸಹ ಹಾಡಿನ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.

Spread the love
Click to comment

Copyright © 2019 PopcornKannada.com