Cinema News

ಕಾಟೇರ ಹಿಂದಿರುವ ನಿಜವಾದ ನಾಯಕ ಜಡೇಶ್

Published

on

ಕಳೆದ ವಾರದಿಂದ ಗಾಂಧಿನಗರದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಜಡೇಶ್. ಕಾರಣ ಇಷ್ಟೇ; ಡಿಸೆಂಬರ್ 29 ರಂದು ರಾಜ್ಯದಾದ್ಯಂತ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಗಳಿಸುತ್ತಿರುವ “ಕಾಟೇರ” ಚಿತ್ರದ ಕಥೆಗಾರನೇ ಜಡೇಶ್ ಕೆ ಹಂಪಿ.

ಕಾಟೇರಾ,ಗುರುಶಿಷ್ಯರು,ಜೆಂಟಲ್ಮನ್ ಹೀಗೆ ಸಾಲು ಸಾಲು ವಿಭಿನ್ನ ಕಂಟೆಂಟ್ ಚಿತ್ರಗಳ ಮೂಲಕ ಚಿತ್ರರಸಿಕರಲ್ಲಿ ಭರವಸೆ ಮೂಡಿಸಿರುವ ಜಡೇಶ ಕೆ ಹಂಪಿ ಅವರು ಅಪ್ಪಟ ದೇಸೀ ಕಥೆಗಾರ. ಹುಟ್ಟಿದ್ದು ಹಂಪಿಯ ಬಳಿಯಿರೋ ಸಣ್ಣಹಳ್ಳಿಯಲ್ಲಿ, ನಮ್ಮ ಮಣ್ಣಿನ ಕಥೆಗಳನ್ನ ಕಟ್ಟುವುದು ನನಗೆ ಅತಿ ಇಷ್ಟವಾಗೋ ಕೆಲಸ ಅನ್ನುತ್ತಾರೆ. ಮೊದಲ ಚಿತ್ರ “ರಾಜಹಂಸ” ದಲ್ಲೂ ಅವರು ಹಳ್ಳಿ ಸೊಗಡು, ರಂಗಭೂಮಿಯನ್ನ ಕಥೆಯಲ್ಲಿ ಎತ್ತಿಹಿಡಿದಿದ್ದರು. ಗುರುಶಿಷ್ಯರು ಚಿತ್ರದಲ್ಲಿ ನಮ್ಮ ದೇಸೀ ಆಟ ಖೋಖೋ ನಶಿಸಿಹೋಗುತ್ತಿರುವ ಬಗ್ಗೆ, ಆ ಆಟಗಾರನ ಬದುಕಿನಲ್ಲಿ ಬರೋ ಸವಾಲನ್ನ ಮನರಂಜನಾತ್ಮಕವಾಗಿ ತೋರಿಸಿ ಗೆದ್ದಿದ್ದರು. ಇನ್ನು ಮೊನ್ನೆ ಬಿಡುಗಡೆಯಾಗಿರೋ “ಕಾಟೇರ‍” ಚಿತ್ರದ ಕಥೆ ಕರ್ನಾಟಕದ ಮೂಲೆಮೂಲೆಯ ಹಳ್ಳಿಗರ , ರೈತರ ಮನಗೆದ್ದಿದೆ. ಈ ಕಥೆ ಹುಟ್ಟಿನ ಬಗ್ಗೆ ಕೇಳಿದಾಗ “ನನ್ನ ಮುತ್ತಜ್ಜಿ ನೂರಾಐದು ವರ್ಷಬದುಕಿದ್ದಳು, ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ಟೈಮ್ ಪಾಸ್ ಮಾಡ್ತಿದ್ದಳು. ಅವಳು ಹೇಳಿದ್ದ ಒಂದು ಕಥೆಯಲ್ಲಿ ಕಾಟೇರ ಚಿತ್ರಕ್ಕೆ ಕಥೆಯಾಗುವಷ್ಟು ಸರಕಿದೆ ಅಂತ ಅಂದು ನಾನು ಎಣಿಸಿರ್ಲಿಲ್ಲ” ಎಂದು ಆಶ್ಚರ್ಯಪಡುತ್ತಾರೆ.

ಇಂದು ಕಾಟೇರ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತ ಜನರಿಗೆ ಹತ್ತಿರವಾಗಿರುವ ಹೊತ್ತಲ್ಲಿ ಅದಕ್ಕೆ ಮೂಲ ಕಥೆ ನೀಡಿರುವ ಜಡೇಶ್ ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು.

ಹಿರಿಯ ನಿರ್ದೇಶಕ ಸಿದ್ಢಲಿಂಗಯ್ಯನವರ ದಾರಿಯನ್ನ ಆದರ್ಶವಾಗಿಟ್ಟು ಕೊಂಡು ಕೆಲ್ಸ ಮಾಡುತ್ತಿರುವ ಜಡೇಶ್ ಅವರಿಂದ ಸಿನಿರಸಿಕರು ಇನ್ನಷ್ಟು ಅಪ್ಪಟ ಕನ್ನಡ ಮಣ್ಣಿನ ಚಿತ್ರಗಳನ್ನ ನಿರೀಕ್ಷಿಸಬಹುದೆಂಬ ಭರವಸೆ ಹುಟ್ಟಿಸಿದ್ದಾರೆ.

ಸದ್ಯ ಅವರು ದುನಿಯಾ ವಿಜಯ್ ಅವರ #VK29 ಆಕ್ಷ್ಯನ್ ಕಟ್ ಹೇಳಲು ರೆಡಿಯಾಗುತ್ತಿದ್ದಾರೆ.

Spread the love
Click to comment

Copyright © 2019 PopcornKannada.com