Cinema News

ಹೆಣ್ಣಿನ ಆಕ್ರೋಶದ ರೂಪ ‘ಮೃತ್ಯುದೇವತೆ’: ಟ್ರೇಲರ್ ಬಿಡುಗಡೆ

Published

on

ಇದು ಸಿಡಿದಿದ್ದ ಹೆಣ್ಣಿನ ಕಥೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೂಡಿಬರುತ್ತಿರುವ ‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನವೀನ್ ಮಹದೇವ್ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.

 

ಗುರುವಾರ ಉತ್ಸವ್ ಲೆಗಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳೊಂದಿಗೆ ಟ್ರೇಲರ್ ಬಿಡುಗಡೆ ಮಾಡಲಾಯಿತು. ಕೆ. ರಮೇಶ್ ಟ್ರೇಲರ್ ಬಿಡುಗಡೆ ಮಾಡಿದರೆ, ಶ್ರೀನಿವಾಸ್ ‘ಮಹದೇವ’ ಹಾಡನ್ನು ಅನಾವರಣಗೊಳಿಸಿದರು. ಹಿರಿಯ ನಟಿ ವಿನಯಾ ಪ್ರಸಾದ್ ‘ಕಾಳಿ’ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ನಿರ್ದೇಶಕ ನವೀನ್ ಮಹದೇವ್ ಮಾತನಾಡಿ, ಇದು ತನ್ನ ಮೊದಲ ನಿರ್ದೇಶನದ ಚಿತ್ರವಾಗಿದ್ದು, ಮಹಿಳೆಯರು ಎದುರಿಸುವ ಸಮಸ್ಯೆಗಳನ್ನೇ ಕಥೆಯಾಗಿ ತೋರಿಸಲು ಪ್ರಯತ್ನಿಸಿದ್ದೇನೆ ಎಂದರು. ಕೆಲವೊಮ್ಮೆ ತಿಳಿಯದೆ ತಪ್ಪು ವಲಯಕ್ಕೆ ಸಿಲುಕುವ ಹೆಣ್ಣುಮಕ್ಕಳು ಅನುಭವಿಸುವ ನೋವು ಮತ್ತು ಆಕ್ರೋಶವೇ ಚಿತ್ರದ ಮುಖ್ಯ ಅಂಶ. ಅತಿರೇಕದ ಪರಿಸ್ಥಿತಿಯಲ್ಲಿ ಆಕೆ ಚಂಡಿ-ಚಾಮುಂಡಿಯಂತೆ ಎದ್ದು ನಿಲ್ಲುವ ಕಥೆಯೇ ‘ಮೃತ್ಯುದೇವತೆ’ ಎಂದು ವಿವರಿಸಿದರು. ಡಾ. ರಾಜಕುಮಾರ್ ಹುಟ್ಟುಹಬ್ಬದ ಸಂದರ್ಭಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದರು.

 

 

 

 

 

ನಟಿ ಸಾರಿಕಾ, ಈ ಚಿತ್ರದಲ್ಲಿ ಆರತಿ ಎಂಬ ಮುಗ್ಧ ಹುಡುಗಿಯ ಪಾತ್ರ ಮಾಡಿದ್ದು, ಆಕೆಯಲ್ಲಿನ ಬದಲಾವಣೆಯನ್ನು ತೋರಿಸುವ ಅವಕಾಶ ಸಿಕ್ಕಿದೆ ಎಂದರು. ಮೊದಲ ಬಾರಿಗೆ ಫೈಟಿಂಗ್ ಸನ್ನಿವೇಶಗಳಲ್ಲಿ ನಟಿಸಿದ್ದು, ತಂಡದ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದರು.

 

ಹಿರಿಯ ನಟಿ ವಿನಯಾ ಪ್ರಸಾದ್, ಚಿತ್ರದ ತಂಡದ ಒಗ್ಗಟ್ಟು ಮತ್ತು ಚಿತ್ರೀಕರಣ ನಡೆದ ಸುಂದರ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರ ಒಳ್ಳೆಯ ಸಂದೇಶ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

 

 

 

 

 

ನಟಿ ಹಿಮಶ್ರೀ, ಸಂಧ್ಯಾ ಎಂಬ ಹಳ್ಳಿಯ ಹುಡುಗಿಯ ಪಾತ್ರ ಮಾಡಿದ್ದು, ಮಂಡ್ಯ ಭಾಷೆಯಲ್ಲಿ ಮಾತನಾಡಿರುವುದು ವಿಶೇಷ ಎಂದು ಹೇಳಿದರು. ಮೇಕಪ್ ಇಲ್ಲದೇ ಸಹಜವಾಗಿ ನಟಿಸಿರುವುದಾಗಿ ತಿಳಿಸಿದರು.

 

ಚಿತ್ರದಲ್ಲಿ ನವೀನ್ ಮಹದೇವ್, ಸಾರಿಕಾ, ವಿನಯಾ ಪ್ರಸಾದ್, ಹಿಮಶ್ರೀ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅನಿರುದ್ಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ರಘು ನೃತ್ಯ ನಿರ್ದೇಶನ, ಶಿವು ಮತ್ತು ಚಿಟ್ಟ ಜಾಧವ್ ಸಾಹಸ ನಿರ್ದೇಶನ ಹಾಗೂ ವಿಕ್ರಮಾದಿತ್ಯ ಸಂಕಲನ ಹೊಂದಿದೆ. ಚಿತ್ರವನ್ನು ಸರಸ್ವತಿ ಅವರು ವರ್ಷಿತಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.

Spread the love
Click to comment

Copyright © 2019 PopcornKannada.com