Cinema News
“ಮೃತ್ಯುದೇವತೆ” ಮೂಲಕ ಸಮಾಜಕ್ಕೆ ಸಂದೇಶ ನೀಡಲು ತಂಡದ ಸಂಕಲ್ಪ
ಇಂದಿನ ಸಮಾಜದಲ್ಲಿ ಮಹಿಳೆಯರು ಹೇಗೆ ಮೋಸದ ಜಾಲಕ್ಕೆ ಸಿಲುಕುತ್ತಾರೆ ಮತ್ತು ಆ ಪರಿಸ್ಥಿತಿಯಿಂದ ಹೊರಬರಲು ಯಾವ ರೀತಿಯ ಹೋರಾಟ ನಡೆಸುತ್ತಾರೆ ಎಂಬುದನ್ನು ತೋರಿಸುವ ಪ್ರಯತ್ನವೇ “ಮೃತ್ಯುದೇವತೆ” ಚಿತ್ರ. ಟ್ರ್ಯಾಪ್‌ಗೆ ಒಳಗಾಗುವ ಮೂವರು ಯುವತಿಯರ ಬದುಕನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ನವೀನ್ ಮಹಾದೇವ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಅವರು ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ “ನಮ್ಮಾವ ಮಾದೇವ” ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಹಿಮಶ್ರೀ ಹಾಗೂ ನವೀನ್ ಮಹಾದೇವ್ ಅಭಿನಯಿಸಿರುವ ಈ ಹಾಡಿಗೆ ಸ್ವತಃ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ. ಈ ವೇಳೆ ಮಾತನಾಡಿದ ನವೀನ್ ಮಹಾದೇವ್, ಚಿತ್ರದ ಬಿಡುಗಡೆಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರುವುದಾಗಿ ತಿಳಿಸಿದರು. ಮೊದಲ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಹೆಣ್ಣುತನದ ಬಗ್ಗೆ ಹಾಡಿನಲ್ಲಿ ನೀಡಿದ ಸಂದೇಶವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದರು. “ನಮ್ಮಾವ ಮಾದೇವ” ಹಾಡನ್ನು ಆರಂಭದಲ್ಲಿ ಸೇರಿಸಿರಲಿಲ್ಲ, ಆದರೆ ಹಿಮಶ್ರೀ ಅವರ ಒತ್ತಾಯದ ಮೇರೆಗೆ ಚಿತ್ರದಲ್ಲಿ ಬಳಸಲಾಯಿತು ಎಂದು ಹೇಳಿದರು. ಟ್ರೈಲರ್ ಕಟ್ ಮಾಡಲು ಸುಮಾರು ಮೂವತ್ತು ದಿನ ತೆಗೆದುಕೊಂಡಿದ್ದು, ಚಿತ್ರದ ಅಸಲಿ ಭಾವನೆಯನ್ನು ಪ್ರೇಕ್ಷಕರಿಗೆ ತಲುಪಿಸಲು ವಿಶೇಷ ಗಮನ ಹರಿಸಲಾಗಿದೆ ಎಂದರು.
ಸಹ ನಿರ್ದೇಶಕ ದೇವು ಮಾತನಾಡಿ, ಚಿತ್ರದಲ್ಲಿರುವ ಕೋಳಿ ಕೊಯ್ಯುವ ದೃಶ್ಯಕ್ಕೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿ ಅನಿಮಲ್ ಬೋರ್ಡ್ ಅನುಮತಿ ಕೇಳಿರುವುದರಿಂದ ಬಿಡುಗಡೆಯಲ್ಲಿ ಸ್ವಲ್ಪ ತಡವಾಗಿದೆ ಎಂದು ಹೇಳಿದರು. ಎಂ.ಪಿ. ಫಿಲಂಸ್‌ನ ಮುನೀಂದ್ರ ಅವರು ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು. ನಾಯಕಿ ಸಾರಿಕಾ ರಾವ್ ಮಾತನಾಡಿ, ಇದು ಕೇವಲ ಮನರಂಜನೆಗಾಗಿ ಮಾಡಿರುವ ಸಿನಿಮಾ ಅಲ್ಲ, ಸಮಾಜದಲ್ಲಿ ಬದಲಾವಣೆ ತರಬಲ್ಲ ಕಥೆಯಾಗಿದೆ ಎಂದರು. ಸ್ವಿಗ್ಗಿ ಡೆಲಿವರಿ ಗರ್ಲ್ ಆರತಿ ಪಾತ್ರದಲ್ಲಿ ನಟಿಸಿರುವ ಅವರು, ಹೆಣ್ಣಿನ ಸಹನೆಯ ಮಿತಿ ಮೀರುವಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದು ತಿಳಿಸಿದರು.
ಮತ್ತೊಬ್ಬ ನಾಯಕಿ ಹಿಮಶ್ರೀ, ಮಲೆನಾಡಿನ ಮುಗ್ಧ ಹುಡುಗಿ ಸೌಮ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ಪರಿಚಯವಾದ ತಕ್ಷಣ ಯಾರನ್ನೂ ನಂಬಬಾರದು ಎಂಬ ಸಂದೇಶವನ್ನು ಚಿತ್ರ ನೀಡುತ್ತದೆ ಎಂದರು. “ಅಣ್ಣಯ್ಯ” ಖ್ಯಾತಿಯ ಮಾಹೀನ್ ಶ್ರೀಮಂತ ಹುಡುಗನ ಪಾತ್ರದಲ್ಲಿ ನಟಿಸಿದ್ದು, ತಪ್ಪು ದಾರಿಯಲ್ಲಿ ಸಾಗಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಿದರು. ಹಿರಿಯ ನಟಿ ವಿನಯಾ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಸರಸ್ವತಿ ಅವರು ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಿಸಿದ್ದಾರೆ. ಅನಿರುದ್ಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಹಾಗೂ ಚಿಟ್ಟ ಜಾಧವ್ ಸಾಹಸ ನಿರ್ದೇಶನ ಮತ್ತು ಮಂಜು ವಿಕ್ರಂ ಸಂಕಲನ ಚಿತ್ರದ ವಿಶೇಷವಾಗಿದೆ.