Cinema News
ನಟ ಧನುಷ್ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ ಗಾಯಕಿ ಸುಚಿತ್ರಾ
ತಮಿಳು ಚಿತ್ರ ರಂಗದ ಅನೇಕ ನಟ ನಟಿಯರ ನಿದ್ದೆಗೆಡಿಸಿದ್ದ ಗಾಯಕಿ ಸುಚಿತ್ರಾ ಇದೀಗ ಮತ್ತೆ ಸುದ್ದಿ ಆಗಿದ್ದಾರೆ. ಇದೀಗ ಸುಚಿತ್ರ ಖ್ಯಾತ ನಟ ಧನುಷ್ ಸೇರಿದಂತೆ ಹಲವರ ವಿರುದ್ಧ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ತನ್ನನ್ನು ಅವಹೇಳನಕಾರಿ ರೀತಿಯಲ್ಲಿ ರಂಗನಾಥನ್ ಎನ್ನುವ ನಟ ಮತ್ತು ಪತ್ರಕರ್ತ ತೋರಿಸುತ್ತಿದ್ದು, ಈ ನಟನ ಹಿಂದೆ ಧನುಷ್ ಮತ್ತು ಇತರ ಕಲಾವಿದರು ಇದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2017ರಲ್ಲಿ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಪೇಜಿನಲ್ಲಿ ಸುಚಿ ಲೀಕ್ಸ್ ಹೆಸರಿನಲ್ಲಿ ಗಾಯಕಿ ಸುಚಿತ್ರ ತಮಿಳು ಚಿತ್ರರಂಗದ ಅನೇಕ ನಟ, ನಟಿಯರ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದು ಕಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿ ಸಾಕಷ್ಟು ಮಂದಿ ತಲೆ ತಗ್ಗಿಸುವಂತೆ ಮಾಡಿತ್ತು. ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿ, ಯಾರೋ ಈ ವಿಡಿಯೋಗಳನ್ನು ಹಂಚುತ್ತಿದ್ದಾರೆ ಎಂದು ಸುಚಿತ್ರಾ ಹೇಳಿದ್ದರು. ಅಲ್ಲಿಂದ ಸುಚಿತ್ರಾ ಅವರ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದ ಸುಚಿತ್ರಾ ಹೇಳಿದ್ದಾರೆ.
ತಾನು ಮಾಡದೇ ಇರುವ ತಪ್ಪಿಗೆ 2017ರಿಂದ ಕಿರುಕುಳವನ್ನು ಅನುಭವಿಸುತ್ತಾ ಬಂದಿದ್ದೇನೆ. ಯೂಟ್ಯೂನಲ್ಲಿ ಪತ್ರಕರ್ತ ಮತ್ತು ನಟನಾಗಿರುವ ಬೈಲ್ವಾನ್ ರಂಗನಾಥ್ ಅನ್ನುವವರು ನಾನು ಲೈಂಗಿಕ ವ್ಯಸನಿ, ಮದ್ಯ ವ್ಯಸನಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಅನೇಕ ವಿಡಿಯೋಗಳನ್ನು ನನ್ನ ವಿರುದ್ಧ ಮಾಡಿದ್ದಾರೆ. ಇವರ ಹಿಂದೆ ನಟ ಧನುಷ್, ನಿರ್ದೇಶಕ ವೆಂಕಟ್ ಪ್ರಭು ಮತ್ತು ಕಾರ್ತಿಕ್ ಕುಮಾರ್ ಎನ್ನುವವರು ಇದ್ದಾರೆ. ಇದರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಸುಚಿತ್ರಾ ದೂರು ನೀಡಿದ್ದಾರೆ.