Cinema News
700 ವರ್ಷಗಳ ಇತಿಹಾಸದ ಕಟಪಾಡಿ ಕಂಬಳದಲ್ಲಿ ಮೊದಲ ಬಾರಿಗೆ ಶೂಟಿಂಗ್; ‘ಕರಾವಳಿ’ ಟೈಟಲ್ ಟ್ರ್ಯಾಕ್ ರಿಲೀಸ್
ಕಡಲ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಸೊಗಡನ್ನು ತೆರೆದಿಡುವ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾದ ‘ಬಾ ಕರಾವಳಿಗೆ…’ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ‘ಕಡಲಿಂದ ನಾಡು… ಕಡಲಿಂದ ಕಾಡು… ಕಡಲಿಂದ ತಾನೆ ಒಡಲಾಗೂಡು…’ ಎಂಬ ಸಾಲುಗಳ ಮೂಲಕ ಕರಾವಳಿಯ ಆತ್ಮವನ್ನು ಪರಿಚಯಿಸುವ ಈ ಹಾಡು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ವಿಶೇಷವಾಗಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳದ ಸಂಪೂರ್ಣ ವೈಭವವನ್ನು ಹಾಡಿನಲ್ಲಿ ಸೆರೆಹಿಡಿಯಲಾಗಿದೆ.
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 24ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಈಗಾಗಲೇ ಚಿತ್ರತಂಡ ಪ್ರಮೋಷನ್ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಬಿಡುಗಡೆಯಾಗಿರುವ ‘ಸೋಲ್ ಆಫ್ ಕರಾವಳಿ’ ಹಾಡು ಸಿನಿಮಾದ ಸಂಸ್ಕೃತಿ ಮತ್ತು ಕಥೆಯ ಹಿನ್ನೆಲೆಯನ್ನು ಮತ್ತಷ್ಟು ಪರಿಚಯಿಸಿದೆ.
ಈ ಹಾಡಿನ ವಿಶೇಷತೆ ಎಂದರೆ ಕಟಪಾಡಿ ಕಂಬಳ ಟ್ರ್ಯಾಕ್‌ನಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಿರುವುದು. ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾವೊಂದರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿನ ಸಂಪ್ರದಾಯ, ಆಚರಣೆ ಹಾಗೂ ಕಂಬಳದ ನೈಜತೆಯನ್ನು ಯಾವುದೇ ಕೃತಕತೆಯಿಲ್ಲದೆ ತೆರೆಗೆ ತರುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತು.
‘ಸೋಲ್ ಆಫ್ ಕರಾವಳಿ’ ಹಾಡಿಗೆ ಸಾಯಿ ವಿಗ್ನೇಶ್ ಧ್ವನಿ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ಅಭಿಮನ್ಯು ಸದಾನಂದನ್ ಕರಾವಳಿಯ ಪ್ರಕೃತಿ, ಸಂಸ್ಕೃತಿ ಹಾಗೂ ಕಂಬಳದ ವೈಭವವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಸಂಪದಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಗಾಣಿಗ ಫಿಲ್ಮ್ಸ್ ನಿರ್ಮಿಸಿರುವ ‘ಕರಾವಳಿ’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಪ್ರೆಸೆಂಟ್ ಮಾಡಿ ವಿತರಣೆ ಮಾಡುತ್ತಿದೆ.