Cinema News
ಶಿವಣ್ಣ ಮೆಚ್ಚಿದ ‘ಟಾಸ್’; ಗೋಲ್ಡನ್ ಮೂವೀಸ್ ಮೂಲಕ ಸೆಪ್ಟೆಂಬರ್ 18ಕ್ಕೆ ಗ್ರ್ಯಾಂಡ್ ಎಂಟ್ರಿ!
ತುಳು ಚಿತ್ರರಂಗದ ಜನಪ್ರಿಯ ನಟ ಹಾಗೂ ಬಹುಮುಖ ಪ್ರತಿಭೆ ಅರ್ಜುನ್ ಕಾಪಿಕಾಡ್ (ಅರ್ಜುನ್ ದೇವ್) ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಅವಿಕಾ ಪ್ರೊಡಕ್ಷನ್ಸ್, ಬಿ.ಆರ್.ಬಿ ಪ್ರೊಡಕ್ಷನ್ಸ್ ಹಾಗೂ P & Y World Tours LLP (ಸಾಗರ್ ಪೂಜಾರಿ) ನಿರ್ಮಿಸಿರುವ ಈ ಚಿತ್ರ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಮೂಡಿಬಂದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರ ‘ಗೋಲ್ಡನ್ ಮೂವೀಸ್’ ಬ್ಯಾನರ್ ‘ಟಾಸ್’ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಅರ್ಪಿಸುತ್ತಿದೆ. ಡಾ. ದೇವದಾಸ್ ಕಾಪಿಕಾಡ್ ಅವರ ಮೇಲಿನ ಗೌರವ ಹಾಗೂ ಚಿತ್ರದ ಮೇಕಿಂಗ್‌ನಿಂದ ಪ್ರಭಾವಿತರಾದ ಶಿಲ್ಪಾ ಗಣೇಶ್, ಕರಾವಳಿಯ ಜನಪ್ರಿಯ ನಟ ಅರ್ಜುನ್ ಕಾಪಿಕಾಡ್ ಅವರನ್ನು ಈ ಚಿತ್ರದ ಮೂಲಕ ಕನ್ನಡಕ್ಕೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಚಿತ್ರದಲ್ಲಿನ ಕಂಟೆಂಟ್ ಹಾಗೂ ಝಲಕ್‌ಗಳನ್ನು ವೀಕ್ಷಿಸಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ಟಾಸ್’ ಚಿತ್ರಕ್ಕೆ ಹಿರಿಯ ಕಲಾವಿದ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದು, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಮಗ ಅರ್ಜುನ್ ದೇವ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ವೃತ್ತಿಪರವಾಗಿ ಮಗನನ್ನು ಅತ್ಯುತ್ತಮ ತಂತ್ರಜ್ಞ ಎಂದು ಶ್ಲಾಘಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ಹಾಗೂ ಅರ್ಮಾನ್ ಮಲಿಕ್ ಗಾಯನದ ‘ಹಲೋ ಹಲೋ ನೀಲಾಂಬರಿ’ ಈಗಾಗಲೇ ಜನಪ್ರಿಯವಾಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯದ ‘ಮಿರ ಮಿರ ಮಿಂಚುತ್ತಾ ನನ್ನ ಕಣ್ಣೀಗೆ ಬಿದ್ದೋಳೆ’ ಹಾಡು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
‘ಟಾಸ್’ ಚಿತ್ರದಲ್ಲಿ ಸುತೇಜ್ ಶೆಟ್ಟಿ, ಗರುಡ ರಾಮ್, ಬಾಲಾಜಿ ಮನೋಹರ್, ಕೃತಿ ಶೆಟ್ಟಿ ಹಾಗೂ ಡಾ. ದೇವದಾಸ್ ಕಾಪಿಕಾಡ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ ಹಾಗೂ ಯಾಶ್ವಿನ್ ಕೆ. ಶೆಟ್ಟಿಗೇರ್ ಸಂಕಲನ ಚಿತ್ರಕ್ಕಿದೆ. 2012ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅರ್ಜುನ್ ಕಾಪಿಕಾಡ್, ಕೊನೆಯುಸಿರಿರುವವರೆಗೂ ಸಿನಿಮಾ ಮಾಡುವುದೇ ತಮ್ಮ ಗುರಿ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿರುವ ‘ಟಾಸ್’ ಚಿತ್ರದ ಮೇಲೆ ಕರಾವಳಿ ಮಾತ್ರವಲ್ಲದೆ ಕರ್ನಾಟಕದಾದ್ಯಂತ ನಿರೀಕ್ಷೆ ಹೆಚ್ಚಾಗಿದೆ.