Cinema News
ಶಾನ್ ಹೀರೋ, ಸಾನ್ಯ ಅಯ್ಯರ್ ನಾಯಕಿ; ಜನ್ಮಾಷ್ಟಮಿಯ ಶುಭದಿನದಂದು ‘ವಿಷ್ಣುವಲ್ಲಭ’ ಆರಂಭ
ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ದಿನದಂದು ಶಾನ್ ಹಾಗೂ ಸಾನ್ಯ ಅಯ್ಯರ್ ನಾಯಕ–ನಾಯಕಿಯಾಗಿ ನಟಿಸುತ್ತಿರುವ ನೂತನ ಚಿತ್ರ ‘ವಿಷ್ಣುವಲ್ಲಭ’ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಆರ್‌ಆರ್ ಫಿಲಂಸ್ ಲಾಂಛನದಲ್ಲಿ ರುಹಿನಾ ರೆಹಮಾನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ‘ರಥಾವರ’ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಹಾಗೂ ನಿರ್ಮಾಪಕ ಕೆ. ಮಂಜು ಕ್ಯಾಮೆರಾಗೆ ಚಾಲನೆ ನೀಡಿದರು. ಹಿರಿಯ ನಿರ್ಮಾಪಕ ರೆಹಮಾನ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
‘ಯಜಮಾನ’, ‘ಹುಚ್ಚ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹಿರಿಯ ನಿರ್ಮಾಪಕ ರೆಹಮಾನ್ ಅವರ ಪುತ್ರಿ ರುಹಿನಾ ರೆಹಮಾನ್ ‘ವಿಷ್ಣುವಲ್ಲಭ’ ಚಿತ್ರದ ನಿರ್ಮಾಪಕಿ. ಈ ಹಿಂದೆ ಗಣೇಶ್ ಅಭಿನಯದ ‘ಮದುವೆಮನೆ’ ಚಿತ್ರವನ್ನು ನಿರ್ಮಿಸಿದ್ದ ಅವರು ಇದೀಗ ತಮ್ಮ ಎರಡನೇ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಚಿತ್ರದ ಕಥೆಯನ್ನು ರುಹಿನಾ ರೆಹಮಾನ್ ಅವರೇ ರಚಿಸಿದ್ದಾರೆ. ನಿರ್ಮಾಣದ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ‘ರಥಾವರ’ ಚಿತ್ರದ ಮೂಲಕ ಗಮನ ಸೆಳೆದಿರುವ ಚಂದ್ರಶೇಖರ್ ಬಂಡಿಯಪ್ಪ ಚಿತ್ರಕ್ಕೆ ನಿರ್ದೇಶನ ನೀಡುತ್ತಿದ್ದು, ಕಥೆಗೆ ತಮ್ಮದೇ ಆದ ನಿರೂಪಣೆಯ ಸ್ಪರ್ಶ ನೀಡಲಿದ್ದಾರೆ.
ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ‘ವಿಷ್ಣುವಲ್ಲಭ’ಕ್ಕೆ ಕೈಜೋಡಿಸಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರಾಜಶೇಖರ್ ಸಂಭಾಷಣೆ ಬರೆಯುತ್ತಿದ್ದಾರೆ. ನಾಯಕ ಶಾನ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಪಾತ್ರಕ್ಕಾಗಿ ಅಗತ್ಯವಿರುವ ಪೂರ್ವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ‘ಪುಟ್ಟಗೌರಿ ಮದುವೆ’ ಖ್ಯಾತಿಯ ಸಾನ್ಯ ಅಯ್ಯರ್ ಅವರಿಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ.
ಚಿತ್ರದ ತಾರಾಬಳಗದಲ್ಲಿ ‘ಕೆಜಿಎಫ್’ ಖ್ಯಾತಿಯ ಅವಿನಾಶ್, ಸಂಪತ್, ಸಂಗೀತ, ಸ್ವಾತಿ ಹಾಗೂ ಯಶ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಇರಲಿದ್ದಾರೆ. ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಬಳಿಕ ಶ್ರೀಲಂಕಾ ಸೇರಿದಂತೆ ವಿದೇಶದ ಹಲವು ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜಿಸಿದೆ. ಪ್ರೀತಿ, ಭಾವನೆ ಹಾಗೂ ಅದ್ಧೂರಿ ಮೇಕಿಂಗ್‌ನೊಂದಿಗೆ ‘ವಿಷ್ಣುವಲ್ಲಭ’ ಸಿನಿಮಾ ಮೂಡಿಬರಲಿದೆ ಎಂಬ ನಿರೀಕ್ಷೆ ಮೂಡಿದೆ.