Cinema News
‘ರಾಮರಸ’ದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್: ವಿಭಿನ್ನ ಅವತಾರದ ಫಸ್ಟ್ ಲುಕ್ ರಿಲೀಸ್!
ಬಹುನಿರೀಕ್ಷಿತ ಮಿಥಿಕಲ್ ಫ್ಯಾಂಟಸಿ ಡ್ರಾಮಾ ‘ರಾಮರಸ’ ಚಿತ್ರದ ತಾರಾಬಳಗದಿಂದ ಮತ್ತೊಂದು ಕುತೂಹಲಕಾರಿ ಪಾತ್ರ ಅನಾವರಣಗೊಂಡಿದೆ. ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ತಮ್ಮ ವಿಭಿನ್ನ ಹಾಸ್ಯ ಶೈಲಿ ಹಾಗೂ ಬಹುಮುಖ ಅಭಿನಯದಿಂದ ಗುರುತಿಸಿಕೊಂಡಿರುವ ಕೋಮಲ್ ಕುಮಾರ್, ಈ ಚಿತ್ರದಲ್ಲಿ ತಮ್ಮದೇ ಹೆಸರಿನ ಪಾತ್ರದಲ್ಲಿ ವಿಶೇಷ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ ಅವರ ಪಾತ್ರದ ಸುತ್ತ ನಿಗೂಢತೆ ಹಾಗೂ ಗಂಭೀರತೆಯ ಸುಳಿವು ನೀಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ. ಗಿರಿರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಮರಸ’ವು ಫ್ಯಾಂಟಸಿ, ಜಾನಪದ ಹಾಗೂ ಸ್ಥಳೀಯ ಸಂಪ್ರದಾಯಗಳನ್ನು ಒಳಗೊಂಡ ವಿಶಾಲ ಕಥಾಹಂದರ ಹೊಂದಿದೆ. ಸಾಂಪ್ರದಾಯಿಕ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಪ್ರೇರಣೆ ಪಡೆದಿರುವ ಈ ಚಿತ್ರವು ಪರಾಶಕ್ತಿಯ ದೈವಿಕ ಆಟವನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದೆ. ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗುರು ಸಿದ್ಧನಾಗಿ, ಕೋಮಲ್ ಕುಮಾರ್ ಕೋಮಲ್ ಕುಮಾರ್ ಆಗಿ ಕಾಣಿಸಿಕೊಳ್ಳಲಿದ್ದು, ಬಿಗ್ ಬಾಸ್ ಕನ್ನಡ ವಿನ್ನರ್ ಕಾರ್ತಿಕ್ ಮಹೇಶ್, ಅದಾ ಶರ್ಮಾ, ಕಾಮಿಡಿ ಕಿಂಗ್ ಶರಣ್, ಹೆಬಾ ಪಟೇಲ್, ಬಾಲಾಜಿ ಮನೋಹರ್, ವೈಶಾಲಿ ಹಾಗೂ ಆದಿತ್ಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣ ಕುಮಾರ್ (ಕೆಕೆ) ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ಡಾ. ವಿ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಾಹಿತ್ಯ ರಚಿಸಿದ್ದಾರೆ. ಜಿ ಸಿನಿಮಾಸ್ ಪ್ರೊಡಕ್ಷನ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಚಿತ್ರದ ಎಡಿಟಿಂಗ್, ವಿಎಫ್‌ಎಕ್ಸ್ ಹಾಗೂ ಸೌಂಡ್ ಡಿಸೈನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಚಿತ್ರತಂಡದ ಪ್ರಕಾರ, ಕೋಮಲ್ ಕುಮಾರ್ ಅವರ ಫಸ್ಟ್ ಲುಕ್ ಅನಾವರಣ ಕೇವಲ ಆರಂಭವಷ್ಟೇ. ‘ರಾಮರಸ’ದ ಇನ್ನಷ್ಟು ಪ್ರಮುಖ ಪಾತ್ರಗಳು ಹಾಗೂ ತಾರೆಯರ ವಿವರಗಳನ್ನು ಹಂತ ಹಂತವಾಗಿ ಪರಿಚಯಿಸುವ ಯೋಜನೆಯಿದೆ. ಶೀಘ್ರದಲ್ಲೇ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಹಾಗೂ ಮತ್ತಷ್ಟು ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಘೋಷಿಸಲಿದೆ. ಅದ್ದೂರಿ ಮೇಕಿಂಗ್ ಹಾಗೂ ಬೃಹತ್ ತಾರಾಬಳಗದೊಂದಿಗೆ ಸಿದ್ಧವಾಗುತ್ತಿರುವ ‘ರಾಮರಸ’ವು ಪ್ಯಾನ್–ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.