Cinema News

ಸಂತೋಷ್ ಬಾಲರಾಜ್ ಕೊನೆಯ ಸಿನಿಮಾ ‘ಬೆಂಟ್ಲಿ’; ಸೆಪ್ಟೆಂಬರ್ 18ಕ್ಕೆ ತೆರೆಗೆ

Published

on

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಂತೋಷ್ ಬಾಲರಾಜ್ ಅವರ ಅಕಾಲಿಕ ನಿಧನ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ನಿಧನಕ್ಕೂ ಮುನ್ನ ಅವರು ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದ ‘ಬೆಂಟ್ಲಿ’ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ನಿರ್ಮಿಸುತ್ತಿದ್ದ ಆನೇಕಲ್ ಬಾಲರಾಜ್ ಹಾಗೂ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಸಂತೋಷ್ ಬಾಲರಾಜ್ ಇಬ್ಬರೂ ಇಂದು ನಮ್ಮೊಂದಿಗಿಲ್ಲ. ತಂದೆ–ಸಹೋದರನ ಕನಸಿನ ಕೂಸಾಗಿರುವ ಈ ಚಿತ್ರವನ್ನು ಪೂರ್ಣಗೊಳಿಸಿ ಪ್ರೇಕ್ಷಕರ ಮುಂದಿಡುವ ಹೊಣೆಗಾರಿಕೆಯನ್ನು ಆನೇಕಲ್ ಬಾಲರಾಜ್ ಅವರ ಪುತ್ರಿ ಹಾಗೂ ಸಂತೋಷ್ ಬಾಲರಾಜ್ ಅವರ ಸಹೋದರಿ ಶ್ವೇತ ಬಾಲರಾಜ್ ವಹಿಸಿಕೊಂಡಿದ್ದಾರೆ. ಸೆಪ್ಟೆಂಬರ್ 18ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

 

 

ಚಿತ್ರ ಬಿಡುಗಡೆಗೆ ಮುನ್ನ ಬೆಂಗಳೂರಿನಲ್ಲಿ ಟ್ರೇಲರ್ ಹಾಗೂ ಹಾಡುಗಳ ಪ್ರದರ್ಶನದೊಂದಿಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ನಟಿ ಶೃತಿ, ನಿರ್ಮಾಪಕಿ ಶ್ವೇತ ಬಾಲರಾಜ್, ನಟ ಹಾಗೂ ಶ್ವೇತ ಅವರ ಪತಿ ಅಶೋಕ್, MAARSS DIGITAL MUSIC AND ENTERTAINMENT LLP ಸಂಸ್ಥೆಯ ವಿತರಕ ಭರತ್ ಜೈನ್, ಪಿಆರ್‌ಒ ಸುಧೀಂದ್ರ ವೆಂಕಟೇಶ್ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್, ಆನೇಕಲ್ ಬಾಲರಾಜ್ ಹಾಗೂ ಸಂತೋಷ್ ಬಾಲರಾಜ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ನೋವಿನ ಸಂಗತಿ ಎಂದರು. ಸಂತೋಷ್ ಅವರು ನಿಧನರಾಗುವ ಮುನ್ನವೇ ತಮ್ಮ ಭಾಗದ ಬಹುತೇಕ ಕೆಲಸವನ್ನು ಪೂರ್ಣಗೊಳಿಸಿದ್ದರು. ಚಿತ್ರವನ್ನು ಬಿಡುಗಡೆ ಮಾಡುವಲ್ಲಿ ಹಲವಾರು ಸ್ನೇಹಿತರು ಸಹಕಾರ ನೀಡಿದ್ದಾರೆ. ಟ್ರೇಲರ್‌ಗೆ ಲೂಸ್ ಮಾದ ಯೋಗಿ ಧ್ವನಿ ನೀಡಿರುವುದಾಗಿ ತಿಳಿಸಿದರು.

 

 

 

 

ನಿರ್ಮಾಪಕಿ ಶ್ವೇತ ಬಾಲರಾಜ್ ಮಾತನಾಡಿ, ‘ಬೆಂಟ್ಲಿ’ ತಮ್ಮ ತಂದೆ ಹಾಗೂ ಸಹೋದರನ ಕನಸಿನ ಸಿನಿಮಾ ಎಂದು ಭಾವುಕರಾದರು. ಚಿತ್ರವನ್ನು ಸೆಪ್ಟೆಂಬರ್ 18ರಂದು ತೆರೆಗೆ ತರುತ್ತಿದ್ದು, ಭರತ್ ಜೈನ್ ಅವರ ಸಂಸ್ಥೆ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಹೇಳಿದರು. ಪತಿ ಅಶೋಕ್ ಸೇರಿದಂತೆ ಚಿತ್ರತಂಡದ ಸಹಕಾರವನ್ನು ಸ್ಮರಿಸಿದ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಶೃತಿ ಹಾಗೂ ಪ್ರದೀಪ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಂದೆ ಮತ್ತು ಸಹೋದರನನ್ನು ನೆನೆಯುತ್ತಾ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಶ್ವೇತ ಭಾವುಕರಾದರು. ನಟಿ ಶೃತಿ ಕೂಡ ಸಂತಾಪದ ವಾತಾವರಣದಲ್ಲಿ ಸಿನಿಮಾ ಸಮಾರಂಭ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು. ಚಿತ್ರದಲ್ಲಿ ತಾನು ಅಭಿನಯಿಸಿರುವುದನ್ನು ನೆನಪಿಸಿಕೊಂಡ ಅವರು, ತಂದೆ–ಸಹೋದರನ ಕೊನೆಯ ಆಸೆಯನ್ನು ಶ್ವೇತ ಈಡೇರಿಸುತ್ತಿರುವುದು ಸಂತಸದ ವಿಚಾರ ಎಂದರು. ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ಯಶಸ್ವಿಗೊಳಿಸುವ ಮೂಲಕ ಸಂತೋಷ್ ಹಾಗೂ ಆನೇಕಲ್ ಬಾಲರಾಜ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

 

 

 

 

 

ಆನೇಕಲ್ ಬಾಲರಾಜ್ ಅವರೊಂದಿಗೆ ಬಾಲ್ಯದಿಂದಲೂ ಪರಿಚಯವಿದ್ದು, ಅವರ ನಿರ್ಮಾಣದ ಹಲವು ಚಿತ್ರಗಳ ಹಾಡುಗಳು ಜಂಕಾರ್ ಸಂಸ್ಥೆಯ ಮೂಲಕ ಬಿಡುಗಡೆಯಾಗಿವೆ ಎಂದು ವಿತರಕ ಭರತ್ ಜೈನ್ ಹೇಳಿದರು. ಇದೀಗ ‘ಬೆಂಟ್ಲಿ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಕೂಡ ಜಂಕಾರ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದ್ದು, ಶ್ವೇತ ಅವರ ಮನವಿಯ ಮೇರೆಗೆ MAARSS DIGITAL MUSIC AND ENTERTAINMENT LLP ಸಂಸ್ಥೆಯ ಮೂಲಕ ಚಿತ್ರವನ್ನು ವಿತರಿಸುತ್ತಿರುವುದಾಗಿ ತಿಳಿಸಿದರು. ಜೂಡಾ ಸ್ಯಾಂಡಿ ಸಂಗೀತ, ಕೆ.ಕೆ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಆಕ್ಷನ್, ಮೆಲೋಡಿ ಹಾಗೂ ಡ್ರಾಮಾ ಅಂಶಗಳನ್ನು ಒಳಗೊಂಡಿರುವ ‘ಬೆಂಟ್ಲಿ’ಯಲ್ಲಿ ಸಂತೋಷ್ ಬಾಲರಾಜ್ ಅವರಿಗೆ ನಾಯಕಿಯಾಗಿ ಸಿಮ್ರಾನ್ ನಾಟೇಕರ್ ಅಭಿನಯಿಸಿದ್ದಾರೆ. ಶೃತಿ, ಚರಣ್ ರಾಜ್, ಬಲ ರಾಜ್ ವಾಡಿ, ಅಶೋಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಸೆಪ್ಟೆಂಬರ್ 18ರಂದು ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

Spread the love

Copyright © 2019 PopcornKannada.com