Cinema News
‘ರೋಲೆಕ್ಸ್’ ಈಗ ‘ರಿಲ್ಯಾಕ್ಸ್’: ಕೋಮಲ್ ಕುಮಾರ್ ಚಿತ್ರದ ಶೀರ್ಷಿಕೆ ಬದಲಾವಣೆ
ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರಿಲ್ಯಾಕ್ಸ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಆರಂಭದಲ್ಲಿ ‘ರೋಲೆಕ್ಸ್’ ಎಂಬ ಶೀರ್ಷಿಕೆಯೊಂದಿಗೆ ರೂಪುಗೊಂಡಿದ್ದ ಈ ಚಿತ್ರಕ್ಕೆ ಇದೀಗ ‘ರಿಲ್ಯಾಕ್ಸ್’ ಎಂದು ಮರುನಾಮಕರಣ ಮಾಡಲಾಗಿದೆ. ಕೋಮಲ್ ಕುಮಾರ್ ಹಾಗೂ ಸೋನಾಲ್ ಮೊಂತೆರೊ ಜೋಡಿಯಾಗಿ ನಟಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳನ್ನು ನಿರ್ಮಾಪಕ ಅಂಬಟಿ ಮಧು ಮೋಹನ್ ಬಿಡುಗಡೆ ಮಾಡಿದರು. ಬಳಿಕ ಚಿತ್ರತಂಡದ ಸದಸ್ಯರು ಸಿನಿಮಾದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಾಡುಗಳನ್ನು ಬಿಡುಗಡೆಗೊಳಿಸಿದ ನಿರ್ಮಾಪಕ ಅಂಬಟಿ ಮಧು ಮೋಹನ್, ಚಿತ್ರದ ಸಂಗೀತ ಉತ್ತಮವಾಗಿ ಮೂಡಿಬಂದಿದ್ದು, ಖ್ಯಾತ ಗಾಯಕರ ಕಂಠದಲ್ಲಿ ಹಾಡುಗಳು ಮನಸೆಳೆಯುವಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಂಧ್ರಪ್ರದೇಶದಲ್ಲಿಯೂ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು. ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಸೇರಿದಂತೆ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಕ್ಟೋಬರ್ 30ರಂದು ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಬೆಂಬಲ ನೀಡುವಂತೆ ಮನವಿ ಮಾಡಿದರು.
ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ಆರಂಭದಲ್ಲಿ ‘ರೋಲೆಕ್ಸ್’ ಎಂಬ ಹೆಸರಿಟ್ಟಿದ್ದ ಚಿತ್ರಕ್ಕೆ ‘ರಿಲ್ಯಾಕ್ಸ್’ ಎಂಬ ಶೀರ್ಷಿಕೆ ಸೂಕ್ತವೆನಿಸಿದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದರು. ಆಂಧ್ರಪ್ರದೇಶ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ನಿರ್ಮಾಪಕ ಅಂಬಟಿ ಮಧು ಮೋಹನ್ ಯಾವುದೇ ಕೊರತೆಯಿಲ್ಲದಂತೆ ಅದ್ದೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ ಎಂದು ಹೇಳಿದರು. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿವೆ. ಜೆಸ್ಸಿ ಗಿಫ್ಟ್ ಸಂಗೀತ, ಖ್ಯಾತ ಗಾಯಕರ ಗಾಯನ, ರಾಕೇಶ್ ತಿಲಕ್ ಅವರ ಛಾಯಾಗ್ರಹಣ ಸೇರಿದಂತೆ ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ ಎಂದು ತಿಳಿಸಿ, ಪ್ರೇಕ್ಷಕರ ಪ್ರೋತ್ಸಾಹ ಕೋರಿದರು.
ನಟ ಕೋಮಲ್ ಕುಮಾರ್ ಮಾತನಾಡಿ, ‘ರೋಲೆಕ್ಸ್’ ಎಂಬ ಶೀರ್ಷಿಕೆ ಇಟ್ಟಾಗಲೇ ಬ್ರ್ಯಾಂಡ್ ಹೆಸರಿನ ಕಾರಣದಿಂದ ಮುಂದೆ ಸಮಸ್ಯೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದೆ. ಚಿತ್ರದ ಅಡಿಬರಹವಾಗಿದ್ದ ‘ರಿಲ್ಯಾಕ್ಸ್’ ಈಗ ಅಧಿಕೃತ ಶೀರ್ಷಿಕೆಯಾಗಿರುವುದು ಸೂಕ್ತ ನಿರ್ಧಾರ ಎಂದರು. ಬಹಳ ವರ್ಷಗಳ ಬಳಿಕ ವಿಭಿನ್ನ ಜಾನರ್‌ನ ಚಿತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ ಅವರು, ನಿರ್ಮಾಪಕ ಅಂಬಟಿ ಮಧು ಮೋಹನ್ ಚಿತ್ರವನ್ನು ಪ್ರೀತಿಯಿಂದ ನಿರ್ಮಿಸಿದ್ದು, ನಿರ್ದೇಶನ, ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಉತ್ತಮವಾಗಿದೆ ಎಂದು ಹೇಳಿದರು. ನಟಿ ಸೋನಾಲ್ ಮೊಂತೆರೊ ಚಿತ್ರೀಕರಣದ ವೇಳೆ ನಿರ್ಮಾಪಕರು ತಮ್ಮನ್ನು ಮಗಳಂತೆ ನೋಡಿಕೊಂಡರು ಹಾಗೂ ಇಡೀ ತಂಡ ಕುಟುಂಬದಂತಿತ್ತು ಎಂದು ಸಂತಸ ಹಂಚಿಕೊಂಡರು. ಕೋಮಲ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ನಟಿಸಿದ್ದು ಉತ್ತಮ ಕಲಿಕೆಯ ಅನುಭವ ನೀಡಿದೆ ಎಂದರು. ಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ, ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ ರೆಡ್ಡಿ, ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಚಿತ್ರತಂಡದ ಇತರ ಸದಸ್ಯರೂ ಮಾತನಾಡಿದರು. ‘ರಿಲ್ಯಾಕ್ಸ್’ ಅಕ್ಟೋಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.