Cinema News

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ‘ಪ್ರೇಮದ ಊರಲಿ’ ಹವಾ – ಶೋಗಳ ಸಂಖ್ಯೆಯೂ ಏರಿಕೆ

Published

on

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆಯ ಮಾತುಗಳ ನಡುವೆಯೇ, ಕೌಟುಂಬಿಕ ಕಥಾಹಂದರದ ‘ಪ್ರೇಮದ ಊರಲಿ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ದಿನದಿಂದ ಚಿತ್ರಕ್ಕೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೆಲವೆಡೆ ಹೌಸ್‌ಫುಲ್ ಪ್ರದರ್ಶನಗಳನ್ನೂ ಕಾಣುತ್ತಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.

 

 

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ಸಾಗುವ ಸರಳ ಹಾಗೂ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ. ಹಳ್ಳಿಯ ನೈಸರ್ಗಿಕ ಸೊಬಗಿನ ನಡುವೆ ಕೌಟುಂಬಿಕ ಸಂಬಂಧಗಳು, ಮಾನವೀಯ ಮೌಲ್ಯಗಳು ಮತ್ತು ಮುಗ್ಧ ಪ್ರೀತಿಯ ವಿವಿಧ ಆಯಾಮಗಳನ್ನು ಸಿನಿಮಾ ತೆರೆದಿಡುತ್ತದೆ. ಪ್ರಸ್ತುತ ಅಬ್ಬರದ ಆ್ಯಕ್ಷನ್ ಮತ್ತು ಭರ್ಜರಿ ಕಮರ್ಷಿಯಲ್ ಸಿನಿಮಾಗಳ ನಡುವೆ, ಭಾವನೆಗಳಿಗೆ ಆದ್ಯತೆ ನೀಡಿರುವ ಈ ಚಿತ್ರವು ಪ್ರೇಕ್ಷಕರಿಗೆ ವಿಭಿನ್ನವಾದ ಫೀಲ್‌ಗುಡ್ ಅನುಭವ ನೀಡುತ್ತಿದೆ.

 

 

 

 

 

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶ್ರೀರಾಮ್, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ಕೌಟುಂಬಿಕ ಸಂಘರ್ಷದ ಭಾವನಾತ್ಮಕ ಸನ್ನಿವೇಶಗಳಿಗೆ ತಮ್ಮ ಅಭಿನಯದ ಮೂಲಕ ಮತ್ತಷ್ಟು ತೂಕ ನೀಡಿದ್ದಾರೆ. ಪಾತ್ರಗಳ ನಡುವಿನ ಸಂಬಂಧಗಳು ಹಾಗೂ ಭಾವನಾತ್ಮಕ ಕ್ಷಣಗಳು ಚಿತ್ರಕ್ಕೆ ಪ್ರಮುಖ ಆಕರ್ಷಣೆಯಾಗಿವೆ.

 

 

 

 

 

ಸುನಾದ್ ಗೌತಮ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ‘ಪ್ರೇಮದ ಊರಲಿ’ಯ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ರಾಜ್‌ಕಾಂತ್ ಅವರ ಛಾಯಾಗ್ರಹಣದಲ್ಲಿ ಗ್ರಾಮೀಣ ಪರಿಸರದ ಹಸಿರು ಸೊಬಗು ಹಾಗೂ ಹಳ್ಳಿಯ ಬದುಕಿನ ನೈಜತೆ ಸುಂದರವಾಗಿ ತೆರೆಕಂಡಿದೆ. ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಚಿತ್ರವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿರುವ ‘ಪ್ರೇಮದ ಊರಲಿ’, ಸದ್ಯ ರಾಜ್ಯಾದ್ಯಂತ ಹೆಚ್ಚುತ್ತಿರುವ ಶೋಗಳೊಂದಿಗೆ ಯಶಸ್ಸಿನ ಪಯಣ ಮುಂದುವರಿಸಿದೆ.

Spread the love

Copyright © 2019 PopcornKannada.com