Cinema News
ಜೂನ್ 20ಕ್ಕೆ ಮಂತ್ರಾಲಯದಲ್ಲಿ ಬಿಡುಗಡೆಯಾಗಲಿದೆ “ರಾಯರ ದರ್ಶನ” ಆಲ್ಬಂ
ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಹಿಮೆ ಹಾಗೂ ಅಲ್ಲಿ ನಡೆಯುವ ವಿಶೇಷ ಉತ್ಸವಗಳನ್ನು ಪರಿಚಯಿಸುವ ಉದ್ದೇಶದಿಂದ ಸಿದ್ಧಗೊಂಡಿರುವ “ರಾಯರ ದರ್ಶನ” ಆಲ್ಬಂ ಸಾಂಗ್ ಜೂನ್ 20ರಂದು ಮಂತ್ರಾಲಯದಲ್ಲೇ ಭವ್ಯವಾಗಿ ಅನಾವರಣಗೊಳ್ಳಲಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಬ್ಯಾನರ್ ಅಡಿಯಲ್ಲಿ ಸುಗುಣ ರಘು ನಿರ್ಮಿಸಿರುವ ಈ ಭಕ್ತಿಪರ ಆಲ್ಬಂ, ರಾಯರ ಕುರಿತಾಗಿ ಇಂದುವರೆಗೂ ಹೆಚ್ಚು ಬೆಳಕಿಗೆ ಬಾರದ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ “TNIT” ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಕೂಡ ಮಾಹಿತಿ ಹಂಚಿಕೊಳ್ಳಲಾಯಿತು. ಕಳೆದ ಹಲವು ವರ್ಷಗಳಿಂದ ವಿದ್ಯುನ್ಮಾನ ಮಾಧ್ಯಮದವರಿಗೆ ನೀಡಲಾಗುತ್ತಿದ್ದ ಈ ಪ್ರಶಸ್ತಿಯನ್ನು ಇದೀಗ ಮುದ್ರಣ ಮಾಧ್ಯಮದವರಿಗೂ ವಿಸ್ತರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಘು ಭಟ್, “ರಾಯರ ದರ್ಶನ” ಆಲ್ಬಂ ನಿರ್ಮಾಣಕ್ಕೆ ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಮಂತ್ರಾಲಯದಲ್ಲಿ ನಡೆಯುವ ಪೂಜೆ, ಆರಾಧನೆ ಹಾಗೂ ವೈಭವೋತ್ಸವಗಳನ್ನು ನೈಜವಾಗಿ ತೋರಿಸಲು ವಿಶೇಷ ಶ್ರಮ ವಹಿಸಲಾಗಿದೆ ಎಂದರು. ಅಜನೀಶ್ ಲೋಕನಾಥ್ ಮತ್ತು ಸಿ.ಆರ್.ಬಾಬಿ ಸಂಗೀತ ಸಂಯೋಜನೆ ಮಾಡಿರುವ ಈ ಆಲ್ಬಂಗೆ “ಕಾಂತಾರ” ಚಿತ್ರದ “ಬ್ರಹ್ಮಕಳಶ” ಹಾಡಿನ ಖ್ಯಾತಿಯ ಅಬ್ಬಿ ವಿ ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟಿ ತಾರಾ ಅನುರಾಧ “ರಾಯರ ದರ್ಶನ” ಟೀಸರ್ ಅನಾವರಣಗೊಳಿಸಿದರು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಮಹೇಶ್ ಗೌಡ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಾಯರ ಮೇಲಿನ ತಮ್ಮ ಭಕ್ತಿಯನ್ನು ಹಂಚಿಕೊಂಡು, ಈ ಆಲ್ಬಂಗೆ ಸಂಗೀತ ನೀಡಿರುವುದು ಜೀವನದ ಪುಣ್ಯ ಎಂದರು. ಗಾಯಕ ಅಬ್ಬಿ ವಿ ಕಾರ್ಯಕ್ರಮದಲ್ಲಿ ಹಾಡಿನ ಕೆಲವು ಸಾಲುಗಳನ್ನು ಹಾಡಿ ಮೆಚ್ಚುಗೆ ಪಡೆದರು.