Cinema News
ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ ‘ರಾಮರಸ’ – ಡಿಸೆಂಬರ್ 11ಕ್ಕೆ ಚಿತ್ರ ಬಿಡುಗಡೆ!
ಜಿ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಬಹುತಾರಾಗಣದ ಚಿತ್ರ ‘ರಾಮರಸ’ ಆರಂಭದಿಂದಲೇ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಗುರು ದೇಶಪಾಂಡೆ ಹಾಗೂ ವಿಕ್ರಮ್ ಆರ್ಯ ನಿರ್ಮಾಣದ ಈ ಚಿತ್ರಕ್ಕೆ ಬಿ.ಎಂ. ಗಿರಿರಾಜ್ ನಿರ್ದೇಶನವಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಇದೇ ಸಂದರ್ಭದಲ್ಲಿ ನಿರ್ಮಾಪಕರು ಹೊಸದಾಗಿ ಆರಂಭಿಸಿರುವ ‘ಸೆವೆನ್ ಸ್ಟಾರ್ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಲೇಬಲ್ ಕೂಡ ಅನಾವರಣಗೊಂಡಿತು. ಟೀಸರ್ಗೆ ನಟ ಶ್ರೀಮುರಳಿ ಧ್ವನಿ ನೀಡಿರುವುದು ವಿಶೇಷ ಆಕರ್ಷಣೆಯಾಗಿದೆ.
ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಮಾತನಾಡಿ, ತಮ್ಮ ನಿರ್ಮಾಣ ಸಂಸ್ಥೆಯ ಚಿತ್ರಗಳ ಹಾಡುಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, ಇತರ ಚಿತ್ರತಂಡಗಳಿಗೂ ವೇದಿಕೆಯಾಗುವ ಉದ್ದೇಶದಿಂದ ಸೆವೆನ್ ಸ್ಟಾರ್ ಮ್ಯೂಸಿಕ್ ಆರಂಭಿಸಿರುವುದಾಗಿ ತಿಳಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೋನಿ ಸಂಸ್ಥೆಯ ಸಹೋದರಿ ಸಂಸ್ಥೆ ಆರ್ಚಿಡ್ನೊಂದಿಗೆ ಕೈಜೋಡಿಸಿರುವುದರಿಂದ, ಕನ್ನಡ ಚಿತ್ರಗಳ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಜನರಿಗೆ ತಲುಪಿಸಲು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೊಸ ನಿರ್ಮಾಪಕರಿಗೆ ಆಡಿಯೋ ಬಿಡುಗಡೆ ಪ್ರಕ್ರಿಯೆಯ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ, ಅವರ ಚಿತ್ರಗಳ ಹಾಡುಗಳನ್ನು ಬಿಡುಗಡೆ ಮಾಡಲು ಈ ಸಂಸ್ಥೆ ಸಹಕಾರ ನೀಡಲಿದೆ ಎಂದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಗುರು ದೇಶಪಾಂಡೆ ಹಾಗೂ ವಿಕ್ರಮ್ ಆರ್ಯ ಸೇರಿ ಸಂಗೀತ ಸಂಸ್ಥೆ ಆರಂಭಿಸಿರುವುದು ಸಂತಸದ ಸಂಗತಿ ಎಂದರು. ನಿರ್ದೇಶಕ ಬಿ.ಎಂ. ಗಿರಿರಾಜ್ ಅವರ ‘ರಾಮರಸ’ ಚಿತ್ರದಲ್ಲಿ ತಾವು ಸುಡುಗಾಡು ಸಿದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರದಲ್ಲಿ ವಿಭಿನ್ನ ಛಾಯೆಗಳೂ ಇರಲಿವೆ ಎಂದು ಕುತೂಹಲ ಹೆಚ್ಚಿಸಿದರು. ಇನ್ನು ಚಿತ್ರದ ನಾಯಕ ಕಾರ್ತಿಕ್ ಮಹೇಶ್ ಭಾವುಕರಾಗಿ ಮಾತನಾಡಿ, ತಮ್ಮನ್ನು ಪೂರ್ಣಪ್ರಮಾಣದ ನಾಯಕನಟನನ್ನಾಗಿ ಪರಿಚಯಿಸುತ್ತಿರುವ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದರು. ಗಿರಿರಾಜ್ ಅವರು ಉತ್ತಮ ಕಥೆ ರೂಪಿಸಿದ್ದು, ಪ್ರಜ್ವಲ್ ದೇವರಾಜ್, ಶರಣ್, ಆದಿತ್ಯ, ಕೋಮಲ್ ಕುಮಾರ್, ಅದಾ ಶರ್ಮಾ ಹಾಗೂ ಅನುಷಾ ರೈ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ ಎಂದು ಹೇಳಿದರು.
ನಟಿ ಅನುಷಾ ರೈ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಭಿನ್ನ ಪಾತ್ರಗಳು, ಬಹುತಾರಾಗಣ ಹಾಗೂ ಕುತೂಹಲ ಮೂಡಿಸಿರುವ ಟೀಸರ್ನಿಂದ ನಿರೀಕ್ಷೆ ಹೆಚ್ಚಿಸಿಕೊಂಡಿರುವ ‘ರಾಮರಸ’ ಚಿತ್ರವು ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಹೊಸ ಸಂಗೀತ ಸಂಸ್ಥೆಯ ಆರಂಭದೊಂದಿಗೆ ಚಿತ್ರತಂಡ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಚಿತ್ರದ ಹಾಡುಗಳು ಮತ್ತು ಸಂಪೂರ್ಣ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.