Cinema News
‘ರಾಮಾಯಣ’ ಜೊತೆಗೆ ‘ರಾಜನಿವಾಸ’ ಪೈಪೋಟಿ; ಚಿತ್ರದ ಗೆಲುವಿನ ಬಗ್ಗೆ ತಂಡಕ್ಕೆ ಭರವಸೆ
ಕೆನೋಪಸ್ ಸಿನಿಮಾಸ್ ಪ್ರೊಡಕ್ಷನ್ ಹಾಗೂ ತಂಬೂರಿ ಫಿಲಂಸ್ ಅರ್ಪಿಸುತ್ತಿರುವ, ಡಿ.ಪಿ. ಆಂಜನಪ್ಪ ನಿರ್ಮಾಣದ ಹಾಗೂ ಲೋಕೇಶ್ ಗೌಡ ಸಹ ನಿರ್ಮಾಣದ ‘ರಾಜನಿವಾಸ’ ಚಿತ್ರ ನವೆಂಬರ್ 6ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅಧಿಕೃತವಾಗಿ ಘೋಷಿಸಿದರು. ಮಿಥುನ್ ಸುವರ್ಣ ನಿರ್ದೇಶನದ ಈ ಸಿನಿಮಾದಲ್ಲಿ ರಾಘವ್ ನಾಯಕ್ ಹಾಗೂ ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕ ಮಿಥುನ್ ಸುವರ್ಣ ಮಾತನಾಡಿ, ನವೆಂಬರ್ 6ರಂದು ‘ರಾಜನಿವಾಸ’ ಬಿಡುಗಡೆಯಾಗುತ್ತಿದ್ದು, ಅದೇ ದಿನ ‘ರಾಮಾಯಣ’ ಚಿತ್ರವೂ ತೆರೆಗೆ ಬರುತ್ತಿರುವುದು ತಿಳಿದಿದೆ ಎಂದರು. ಆದರೆ ತಮ್ಮ ಸಿನಿಮಾದ ಕಥೆ ಹಾಗೂ ಕಂಟೆಂಟ್ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಎಂದಿಗೂ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು. ಇತ್ತೀಚೆಗೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಗುಣಮಟ್ಟದ ಸಿನಿಮಾ ಬಂದಾಗ ಜನರು ಅದನ್ನು ಬೆಂಬಲಿಸುತ್ತಾರೆ ಎಂದ ಅವರು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ‘ರಾಜನಿವಾಸ’ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಉತ್ತಮ ಕಂಟೆಂಟ್ ಹಾಗೂ ಮೌತ್ ಪಬ್ಲಿಸಿಟಿ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ನಾರಾಯಣಗೌಡ ಮಾತನಾಡಿ, ರಾಜ್ಯೋತ್ಸವದ ಸಮಯದಲ್ಲಿ ‘ರಾಜನಿವಾಸ’ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ ಎಂದರು. ಕಥೆ ಮತ್ತು ನಿರೂಪಣೆ ಉತ್ತಮವಾಗಿದ್ದರೆ ಪ್ರೇಕ್ಷಕರು ಖಂಡಿತವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ಹೇಳಿದರು. ನಿರ್ಮಾಪಕ ಡಿ.ಪಿ. ಆಂಜನಪ್ಪ ಅವರು ಹಲವು ವರ್ಷಗಳಿಂದ ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಸಿನಿಮಾ ಮೇಲಿನ ಆಸಕ್ತಿಯಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ಚಿತ್ರದ ಕೆಲವು ದೃಶ್ಯಗಳನ್ನು ವೀಕ್ಷಿಸಿದ್ದು, ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಿಂದ ಚಿತ್ರರಂಗ ಮತ್ತಷ್ಟು ಬೆಳೆಯಲಿದೆ ಎಂದು ಹೇಳಿದ ಅವರು, ಆಂಜನಪ್ಪ ಅವರೊಂದಿಗೆ ತಂಬೂರಿ ಫಿಲಂಸ್ ಹಾಗೂ ಕರವೇ ಕಾರ್ಯಕರ್ತರು ಸದಾ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಭರವಸೆ ನೀಡಿದರು.
ಅಶ್ವಿನಿಗೌಡ ಮಾತನಾಡಿ, ತಾವು ಕೂಡ ಕಲಾವಿದೆಯಾಗಿರುವುದರಿಂದ ಸಿನಿಮಾ ನಿರ್ಮಾಣದ ಹಿಂದಿನ ಕಷ್ಟಗಳು ಹಾಗೂ ಸವಾಲುಗಳ ಅರಿವಿದೆ ಎಂದರು. ಟೀಕೆಗಳಿಗೆ ಉತ್ತರವನ್ನು ಯಶಸ್ಸಿನ ಮೂಲಕ ನೀಡಬೇಕು ಹಾಗೂ ಸೋಲು-ಗೆಲುವಿನ ನಡುವೆಯೂ ಪ್ರಯತ್ನ ನಿರಂತರವಾಗಿರಬೇಕು ಎಂದು ಹೇಳಿದರು. ನಿರ್ದೇಶಕರ ಆತ್ಮವಿಶ್ವಾಸ ತಮ್ಮ ಗಮನ ಸೆಳೆದಿದೆ ಎಂದರು. ನಿರ್ಮಾಪಕ ಆಂಜನಪ್ಪ, ಸಹ ನಿರ್ಮಾಪಕ ಲೋಕೇಶ್ ಗೌಡ, ಹಾಸ್ಯನಟ ವಿಜಯ್ ಚೆಂಡೂರು, ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ, ಲಲ್ಲೇಶ್ ರೆಡ್ಡಿ, ನಾಗೇಶ್ ರೆಡ್ಡಿ, ಮುನಿಕೃಷ್ಣಣ್ಣ, ರಾಜಶೇಖರ್ ಸೇರಿದಂತೆ ಹಲವರು ಚಿತ್ರದ ಕುರಿತು ಮಾತನಾಡಿದರು. A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿವೆ. ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ವಿಶ್ವಾಸವಿದ್ದು, ಎಲ್ಲರ ಪ್ರೋತ್ಸಾಹವನ್ನು ಚಿತ್ರತಂಡ ಕೋರಿದೆ.