Cinema News

“ಮದನಿಕ” ಸಾಂಗ್‌ನಲ್ಲಿ ಕತ್ತಿ ಹಿಡಿದು ಮಿಂಚಿದ ರಾಗಿಣಿ ದ್ವಿವೇದಿ

Published

on

ವಿಭಿನ್ನ ಶೀರ್ಷಿಕೆ ಮತ್ತು ಕಥಾಹಂದರದೊಂದಿಗೆ ನಿರ್ಮಾಣವಾಗಿರುವ “ಮದನಿಕ” ಚಿತ್ರದ ಟ್ರೇಲರ್ ಹಾಗೂ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಬಿ.ಎಸ್. ಸಂಜಯ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಾಡಿನಲ್ಲಿ ಕತ್ತಿ ಹಿಡಿದು ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಹಳೆಯ ಕನ್ನಡ ಸೊಗಡಿನೊಂದಿಗೆ ಮೂಡಿಬಂದಿರುವ ಈ ಚಿತ್ರದ ಝಲಕ್ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

 

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಬಿ.ಎಸ್. ಸಂಜಯ್, “ಮದನಿಕ” ಸುಮಾರು 400 ವರ್ಷದ ಹಳೆಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿದರು. ಕಥೆ ರೂಪಿಸುವ ಸಮಯದಲ್ಲಿ ಅನೇಕ ವಿಶೇಷ ಅನುಭವಗಳು ಎದುರಾದವು. ಮೊದಲು ತಮ್ಮ ಪತ್ನಿ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಕಥೆ ಹಂಚಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದರು. ರಾಗಿಣಿ ದ್ವಿವೇದಿ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡಿದ್ದು, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು, ಕ್ಲಾಸಿಕಲ್ ಶೈಲಿಯ ಸಂಗೀತ ವಿಶೇಷ ಆಕರ್ಷಣೆಯಾಗಲಿದೆ ಎಂದರು.

 

 

 

 

 

 

ನಟಿ ರಾಗಿಣಿ ದ್ವಿವೇದಿ ಮಾತನಾಡಿ, “ಮದನಿಕ” ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಬಿಡುಗಡೆಯಾಗಿರುವುದು ಕೇವಲ ಒಂದು ಝಲಕ್ ಮಾತ್ರ, ಚಿತ್ರದೊಳಗೆ ಅದ್ಭುತ ಕಥೆ ಹಾಗೂ ಭಾವನೆಗಳಿವೆ ಎಂದು ಹೇಳಿದರು. ಎರಡೂವರೆ ವರ್ಷದ ಪ್ರಯಾಣದಲ್ಲಿ ಸಿನಿಮಾ ತಾಂತ್ರಿಕವಾಗಿ ದೊಡ್ಡ ಮಟ್ಟದಲ್ಲಿ ರೂಪುಗೊಂಡಿದ್ದು, ಅದ್ಭುತ ಆಕ್ಷನ್ ಮತ್ತು ಸಂಗೀತ ಪ್ರೇಕ್ಷಕರನ್ನು ಸೆಳೆಯಲಿದೆ ಎಂದರು. ಇಂತಹ ಶೈಲಿಯ ಸಿನಿಮಾ ಬಹಳ ವರ್ಷಗಳ ಬಳಿಕ ಬರುತ್ತಿದೆ ಎಂದು ಹೇಳಿದರು.

 

ಸಂಗೀತ ನಿರ್ದೇಶಕ ಸಲಾಂ ಕೇರಳ ಮಾತನಾಡಿ, ನಿರ್ದೇಶಕ ಸಂಜಯ್ ನೀಡಿದ ಅವಕಾಶ ತಮ್ಮ ವೃತ್ತಿಜೀವನದಲ್ಲಿ ವಿಶೇಷ ಎಂದರು. ಮೊದಲಿಗೆ ಸಾಮಾನ್ಯ ಶೈಲಿಯ ಸಂಗೀತದ ಯೋಚನೆ ಇದ್ದರೂ, ನಿರ್ದೇಶಕರ ಸಲಹೆಯಂತೆ ಕ್ಲಾಸಿಕಲ್ ಸ್ಪರ್ಶ ನೀಡಲಾಗಿದೆ ಎಂದು ತಿಳಿಸಿದರು.

 

ನಟ ವಿಕ್ಟರಿ ವಾಸು ಮಾತನಾಡಿ, “ಮದನಿಕ” ಎಂಬ ಹೆಸರೇ ವಿಶೇಷ ಆಕರ್ಷಣೆ ಹೊಂದಿದ್ದು, ಅದಕ್ಕೆ ರಾಗಿಣಿ ಜೀವ ತುಂಬಿದ್ದಾರೆ ಎಂದರು. ನಿರ್ದೇಶಕ ಸಂಜಯ್ ಅವರೊಂದಿಗೆ ತಮ್ಮ ದೀರ್ಘಕಾಲದ ಬಾಂಧವ್ಯವನ್ನು ನೆನಪಿಸಿಕೊಂಡು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

 

 

 

 

 

 

ಎಸ್‌ಪಿಆರ್ ಪ್ರೊಡಕ್ಷನ್ ಹಾಗೂ ಸಖರ್ಥ್ ಡಿಜಿಟಲ್ ಹೌಸ್ ಬ್ಯಾನರ್‌ನಲ್ಲಿ ಸುಜಾತ ಲಕ್ಷ್ಮೀ ಮತ್ತು ಕುಮಾರಸ್ವಾಮಿ ನಿರ್ಮಿಸಿರುವ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

Spread the love

Copyright © 2019 PopcornKannada.com