Cinema News
ಇಂದ್ರಲೋಕದ ಅಪ್ಸರೆಯಂತೆ ಮಿಂಚಿದ ರಾಗಿಣಿ ದ್ವಿವೇದಿ
‘ಮದನಿಕ’ ಚಿತ್ರದ ಹೊಸ ಹಾಡು “ಕಾನನಗಳ ಕನ್ನಿಕಾ, ಇಂದ್ರಲೋಕ ಚಂದ್ರಿಕಾ” ಬಿಡುಗಡೆಯಾಗಿ ಸಂಗೀತ ಪ್ರಿಯರ ಮನಸೆಳೆಯುತ್ತಿದೆ. ಸುಮಧುರ ಸಾಹಿತ್ಯ ಮತ್ತು ಆಕರ್ಷಕ ದೃಶ್ಯ ವೈಭವದಿಂದ ಕೂಡಿರುವ ಈ ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಹಾಡಿನ ಪ್ರತಿಯೊಂದು ಫ್ರೇಮ್ ಕೂಡ ರಾಜಮನೆತನದ ವೈಭವವನ್ನು ನೆನಪಿಸುವಂತೆ ಮೂಡಿಬಂದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಹಾಡಿನಲ್ಲಿ ರಾಗಿಣಿ ರಾಜಮಹಿಷಿಯಂತೆ ಕಾಣಿಸಿಕೊಂಡರೆ, ನಟ ದೇವ್ ಗಿಲ್ ರಾಜನ ಪಾತ್ರದಲ್ಲಿ ಮಿಂಚಿದ್ದಾರೆ. ಗೊಂಬೆಗಳ ರೂಪದಲ್ಲಿ ರಾಜ-ರಾಣಿ ಹಾಗೂ ಸೇವಕಿಯರ ಕಲ್ಪನಾತ್ಮಕ ನಿರೂಪಣೆ ಹಾಡಿಗೆ ವಿಭಿನ್ನ ಮೆರುಗು ನೀಡಿದೆ. ಅರಮನೆ ಹಿನ್ನೆಲೆಯ ಅದ್ದೂರಿ ಸೆಟ್‌ಗಳು ಮತ್ತು ದೇವಲೋಕದಂತಿರುವ ದೃಶ್ಯ ಸಂಯೋಜನೆ ಹಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ಈ ಹಾಡಿಗೆ ಖ್ಯಾತ ಗೀತರಚನೆಕಾರ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು, ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಅವರ ಮಧುರ ಧ್ವನಿಗಳು ಹಾಡಿನ ಭಾವನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಿವೆ. ಡಿಬೀಟ್ ಮ್ಯೂಸಿಕ್ ವರ್ಲ್ಡ್ ಮೂಲಕ ಬಿಡುಗಡೆಯಾದ ಈ ಹಾಡು ಈಗಾಗಲೇ ಉತ್ತಮ ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
‘ಎಸ್.ಪಿ.ಆರ್ ಪ್ರೊಡಕ್ಷನ್ಸ್’ ಹಾಗೂ ‘ಸಖರ್ಥ್ ಡಿಜಿಟಲ್ ಹೌಸ್’ ಬ್ಯಾನರ್ ಅಡಿಯಲ್ಲಿ ಸುಜಾತ ಲಕ್ಷ್ಮೀ ಮತ್ತು ಕುಮಾರಸ್ವಾಮಿ ನಿರ್ಮಿಸಿರುವ ‘ಮದನಿಕ’ ಚಿತ್ರಕ್ಕೆ ಬಿ.ಎಸ್. ಸಂಜಯ್ ನಿರ್ದೇಶನವಿದೆ. ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ ಮತ್ತು ಶಶಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್. ಗಿರಿ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು, ಶಾಸ್ತ್ರೀಯ ಶೈಲಿಯ ಸಂಗೀತವನ್ನು ಸಲಾಂ ವೇರೋಲಿ ನೀಡಿದ್ದಾರೆ. ಕೆ. ಕಲ್ಯಾಣ್ ಹಾಗೂ ಡಾ. ದೇವಾನಂದ್ ಸಾಹಿತ್ಯ ರಚಿಸಿದ್ದು, ಮದನ್ ಹರಿಣಿ ಮತ್ತು ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ.