Cinema News

ಅಭಯ್‌ವೀರ್ ಅಭಿನಯದ ‘ಡೆಡ್ಲಿ ಕಿಲ್ಲರ್’ಗೆ ರಾಗಿಣಿ ದ್ವಿವೇದಿ ಶುಭ ಹಾರೈಕೆ

Published

on

ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್‌ಗಳ ಅಡಿಯಲ್ಲಿ ಪ್ರಶಾಂತ್ ಟಿ. ತಂಬ್ರಳ್ಳಿಮಠ ನಿರ್ಮಿಸಿರುವ ‘ಡೆಡ್ಲಿ ಕಿಲ್ಲರ್’ ಚಿತ್ರದ ಟ್ರೈಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಪೊಲೀಸ್ ಸ್ಟೋರಿ ಬಳಿಕ ಸುಮಾರು 15 ವರ್ಷಗಳ ನಂತರ ಮತ್ತೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಈ ಚಿತ್ರದಲ್ಲಿ ಸಂಭ್ರಮ ಖ್ಯಾತಿಯ ಅಭಯ್‌ವೀರ್ ಮತ್ತು ನಿವೀಕ್ಷಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ ಟ್ರೈಲರ್ ಅನಾವರಣಗೊಳಿಸಿದರೆ, ರವಿಚೇತನ್ ಹಾಗೂ ವಿಕ್ಟರಿ ವಾಸು ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ರಾಗಿಣಿ ದ್ವಿವೇದಿ, ಜೂನ್ 6, 2026ರಂದು ಟ್ರೈಲರ್ ಲಾಂಚ್ ಮಾಡುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ ಎಂದರು. ಚಿತ್ರರಂಗದಲ್ಲಿ ಹೊಸಬರಿಗೆ ಬೆಂಬಲ ಅಗತ್ಯವಾಗಿದ್ದು, ಕನ್ನಡದ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ನಿರ್ಮಾಪಕ ಪ್ರಶಾಂತ್ ತಂಬ್ರಳ್ಳಿಮಠ, ಸ್ನೇಹಿತ ಅಭಯ್‌ವೀರ್ ಮೂಲಕ ಥ್ರಿಲ್ಲರ್ ಮಂಜು ಪರಿಚಯವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಿನಿಮಾ ನಿರ್ಮಾಣದ ಅನುಭವ ಪಡೆದೆ ಎಂದು ಹೇಳಿದರು.

 

 

 

 

 

ನಾಯಕ ಅಭಯ್‌ವೀರ್ ಮಾತನಾಡಿ, ಚಿತ್ರದಲ್ಲಿ ಆರು ವಿಭಿನ್ನ ಸಾಹಸ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ ಎಂದು ತಿಳಿಸಿದರು. ತಮ್ಮ ವೃತ್ತಿಜೀವನದಲ್ಲಿ ಥ್ರಿಲ್ಲರ್ ಮಂಜು ಪ್ರಮುಖ ಮಾರ್ಗದರ್ಶಕರಾಗಿದ್ದು, ಚಿತ್ರಕ್ಕಾಗಿ ವಿಶೇಷ ಶ್ರಮವಹಿಸಿದ್ದೇನೆ ಎಂದರು. ನಾಯಕಿ ನಿವೀಕ್ಷಾ, ಚಿತ್ರದಲ್ಲಿ ನಾಯಕನ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡು ವಿಭಿನ್ನ ಶೇಡ್‌ಗಳ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿದರು.

 

 

 

 

 

 

ನಿರ್ದೇಶಕ ಥ್ರಿಲ್ಲರ್ ಮಂಜು ಚಿತ್ರದ ಕಥೆಯ ಬಗ್ಗೆ ಮಾತನಾಡುತ್ತ, ಕಾಡಿನಲ್ಲಿ ಅಡಗಿಕೊಳ್ಳುವ ಆರು ಗ್ಯಾಂಗ್‌ಸ್ಟರ್‌ಗಳನ್ನು ನಾಯಕ ಹೇಗೆ ತನ್ನ ಬುದ್ಧಿವಂತಿಕೆಯಿಂದ ಸೆರೆಯಾಳು ಮಾಡುತ್ತಾನೆ ಎಂಬುದು ಚಿತ್ರದ ಪ್ರಮುಖ ಅಂಶ ಎಂದು ವಿವರಿಸಿದರು. ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಹಾಗೂ ಆಕ್ಷನ್‌ಗಳ ಸಮನ್ವಯದಲ್ಲಿ ಸಿನಿಮಾ ಮೂಡಿಬಂದಿದ್ದು, ವಿನು ಮನಸು ಸಂಗೀತ ನಿರ್ದೇಶನದ ಮೂರು ಹಾಡುಗಳು ಚಿತ್ರದಲ್ಲಿವೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ದೀಪು ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಂಯೋಜಿಸಿರುವ ಆರು ಸಾಹಸ ದೃಶ್ಯಗಳು ಚಿತ್ರದ ಹೈಲೈಟ್ ಆಗಿವೆ. ಲೋಕೇಂದ್ರ ಸೂರ್ಯ, ಸುನಿಲ್ ಬಾಲ್ಡರ್, ಪುನೀತ್, ಅಭಿ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಸಿನಿಮಾ ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Spread the love

Copyright © 2019 PopcornKannada.com