Cinema News
ಪಿ.ಸಿ. ಶೇಖರ್ ನಿರ್ದೇಶನದ ‘ಮಹಾನ್’ನಲ್ಲಿ ರಾಧಿಕಾ ನಾರಾಯಣ್, ಮಿತ್ರಗೆ ವಿಶೇಷ ಪಾತ್ರಗಳು
ನಿರ್ದೇಶಕ ಪಿ.ಸಿ. ಶೇಖರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಮಹಾನ್’ ಚಿತ್ರದ ಮತ್ತೊಂದು ವಿಶೇಷ ಅನಾವರಣಗೊಂಡಿದೆ. ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬೂದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದು, ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ಹಿರಿಯ ನಟ ಮಿತ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಇಬ್ಬರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರದಲ್ಲಿ ಗ್ರಾಮೀಣ ಹಿನ್ನೆಲೆಯ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ನಾರಾಯಣ್, ಇದು ತಮ್ಮ ವೃತ್ತಿಜೀವನದ ವಿಭಿನ್ನ ಅನುಭವ ಎಂದು ತಿಳಿಸಿದ್ದಾರೆ. ನಗರದಲ್ಲಿ ಬೆಳೆದಿದ್ದರೂ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿರುವುದು ಸಂತಸ ತಂದಿದ್ದು, ನಾಯಕನ ಜೀವನದಲ್ಲಿ ಧೈರ್ಯ ತುಂಬುವ ಹಾಗೂ ಬೆಂಬಲವಾಗಿ ನಿಲ್ಲುವ ಪಾತ್ರ ಇದಾಗಿದೆ ಎಂದಿದ್ದಾರೆ. ಪಿ.ಸಿ. ಶೇಖರ್ ಅವರೊಂದಿಗೆ ಕೆಲಸ ಮಾಡುವ ಕನಸು ಇದೀಗ ನನಸಾಗಿದ್ದು, ಶಿವರಾಜಕುಮಾರ್ ಅವರ ವಿಶೇಷ ಪಾತ್ರ ಹಾಗೂ ವಿಜಯ್ ರಾಘವೇಂದ್ರ, ವರ್ಷ ಬೊಳ್ಳಮ್ಮ, ಮಿತ್ರ ಅವರೊಂದಿಗೆ ಅಭಿನಯಿಸಿರುವುದು ಮತ್ತಷ್ಟು ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ನಟ ಮಿತ್ರ, ‘ರಾಗ’ ಚಿತ್ರದ ಬಳಿಕ ಮತ್ತೆ ಪಿ.ಸಿ. ಶೇಖರ್ ನಿರ್ದೇಶನದಲ್ಲಿ ಅಭಿನಯಿಸುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಸೋದರಮಾವನಾಗಿ, ನಾಯಕನ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿರುವ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ರೈತರ ಬದುಕು ಮತ್ತು ಸಾಮಾಜಿಕ ಕಾಳಜಿಯನ್ನು ಆಧರಿಸಿದ ಕಥೆಯಲ್ಲಿ ತಮ್ಮ ಪಾತ್ರಕ್ಕೂ ವಿಶೇಷ ಸ್ಥಾನವಿದ್ದು, ಪ್ರೇಕ್ಷಕರು ಅದನ್ನು ಮೆಚ್ಚಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಿರ್ದೇಶಕ ಪಿ.ಸಿ. ಶೇಖರ್ ಅವರ ಪ್ರಕಾರ, ವಿಜಯ್ ರಾಘವೇಂದ್ರ ಅವರು ಸಾಮಾಜಿಕ ಕಾಳಜಿ ಹೊಂದಿರುವ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೀವನಯಾನಕ್ಕೆ ಬಲ ನೀಡುವ ಪಾತ್ರದಲ್ಲಿ ರಾಧಿಕಾ ನಾರಾಯಣ್ ನಟಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಡುವ ನಾಯಕನಿಗೆ ನೆರಳಾಗಿ ನಿಲ್ಲುವ ವ್ಯಕ್ತಿಯಾಗಿ ಮಿತ್ರ ಅಭಿನಯಿಸಿದ್ದು, ಅವರ ಪಾತ್ರ ಕಥೆಗೆ ಹೆಚ್ಚಿನ ಭಾವನಾತ್ಮಕ ತೂಕ ನೀಡಲಿದೆ ಎಂದಿದ್ದಾರೆ. ನಿರ್ಮಾಪಕ ಪ್ರಕಾಶ್ ಬೂದೂರು, ಆಕಾಶ ಪಿಕ್ಚರ್ಸ್‌ನ ಮೊದಲ ನಿರ್ಮಾಣವಾಗಿರುವ ‘ಮಹಾನ್’ ಚಿತ್ರದ ಮೂಲಕ ಉತ್ತಮ ಮತ್ತು ಸದಭಿರುಚಿಯ ಸಿನೆಮಾವನ್ನು ಪ್ರೇಕ್ಷಕರಿಗೆ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.