Cinema News
ಆರ್. ಚಂದ್ರು–ಶಿವಣ್ಣ ಕಾಂಬಿನೇಶನ್ ಮತ್ತೆ; ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರೀಕರಣಕ್ಕೆ ಗ್ರ್ಯಾಂಡ್ ಚಾಲನೆ
‘ತಾಜ್ ಮಹಲ್’, ‘ಚಾರ್ ಮಿನಾರ್’, ‘ಮೈಲಾರಿ’ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ ‘ಕಬ್ಜ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್. ಚಂದ್ರು, ಎರಡೂವರೆ ವರ್ಷಗಳ ಬಳಿಕ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕೆಂಗೇರಿಯ ಮೋದಿ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಇದರೊಂದಿಗೆ ಸಿನಿಮಾದ ಚಿತ್ರೀಕರಣಕ್ಕೂ ಅಧಿಕೃತವಾಗಿ ಚಾಲನೆ ದೊರೆತಿದೆ.
ಆನಂದ್ ಪಂಡಿತ್ ಅರ್ಪಿಸುತ್ತಿರುವ, ಆರ್.ಸಿ. ಸ್ಟುಡಿಯೋಸ್ ಬ್ಯಾನರ್ನಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿರುವ ಈ ಸಿನಿಮಾ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಗೀತಾ ಶಿವರಾಜಕುಮಾರ್, ನೈಸ್ ಸಂಸ್ಥೆಯ ಅಶೋಕ್ ಖೇಣಿ, ಮಾಧವ ಕಿರಣ್, ನಿರ್ಮಾಪಕರಾದ ಉದಯ್ ಕೆ. ಮೆಹ್ತಾ, ಗಂಗಾಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದರೂ, ತಮ್ಮ ಸಿನಿಮಾ ಪಯಣದಲ್ಲಿ ಸದಾ ಬೆಂಬಲ ನೀಡುತ್ತಾ ಬಂದಿರುವ ಕನ್ನಡ ಮಾಧ್ಯಮಗಳ ಸಮ್ಮುಖದಲ್ಲೇ ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಬೇಕು ಎಂಬುದು ತಮ್ಮ ಆಸೆಯಾಗಿತ್ತು ಎಂದು ಆರ್. ಚಂದ್ರು ಹೇಳಿದರು.
‘ಮೈಲಾರಿ’ ಮತ್ತು ‘ಕಬ್ಜ’ ಬಳಿಕ ಶಿವರಾಜಕುಮಾರ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಿದೆ ಎಂದಿರುವ ಚಂದ್ರು, ಈ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಸುನೀಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಭಾರತದ ವಿವಿಧ ಚಿತ್ರರಂಗಗಳ ಜನಪ್ರಿಯ ಕಲಾವಿದರು ಸಿನಿಮಾದ ತಾರಾಬಳಗದಲ್ಲಿ ಇರಲಿದ್ದು, ಮುಂದಿನ ದಿನಗಳಲ್ಲಿ ಅವರ ಕುರಿತು ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ಎಚ್ಎಂಟಿ ಮೈದಾನದಲ್ಲಿ ಬೃಹತ್ ಸೆಟ್ ನಿರ್ಮಾಣವಾಗಿದ್ದು, ಮೊದಲ ಹಂತದ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಅದ್ದೂರಿ ಮೇಕಿಂಗ್ನೊಂದಿಗೆ ‘ಒರಿಜಿನಲ್ ಮಾನ್‌ಸ್ಟರ್’ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಜ್ಜಾಗಿದೆ.
ಕಥೆ ಇಷ್ಟವಾದಾಗ ಮಾತ್ರ ಸಿನಿಮಾ ಒಪ್ಪಿಕೊಳ್ಳುವ ಶಿವರಾಜಕುಮಾರ್ ಅವರಿಗೆ ಆರ್. ಚಂದ್ರು ಹೇಳಿದ ‘ಒರಿಜಿನಲ್ ಮಾನ್‌ಸ್ಟರ್’ ಕಥೆ ಮೆಚ್ಚುಗೆಯಾಗಿದ್ದು, ಇದೇ ಕಾರಣಕ್ಕೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ‘ಮಾನ್‌ಸ್ಟರ್’ ಎಂದರೆ ದೈತ್ಯ ಎಂದರ್ಥವಾದರೂ, ಸಿನಿಮಾದಲ್ಲಿರುವ ಪಾತ್ರದಲ್ಲಿ ಕೇವಲ ದೈತ್ಯತನವಷ್ಟೇ ಅಲ್ಲದೆ ಭಿನ್ನವಾದ ಮತ್ತೊಂದು ಆಯಾಮವಿದೆ ಎಂದು ಶಿವಣ್ಣ ಹೇಳಿದ್ದಾರೆ. ಚಂದ್ರು ಅವರು ಭಾವನಾತ್ಮಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ನಿರ್ದೇಶಕರಾಗಿದ್ದು, ಈ ಚಿತ್ರದಲ್ಲೂ ಎಮೋಷನ್ ಪ್ರಮುಖವಾಗಿ ಮೂಡಿಬರಲಿದೆ ಎಂದಿದ್ದಾರೆ. ಇದುವರೆಗೂ ತಾವು ಮಾಡಿರದಂತಹ ಪಾತ್ರ ಇದಾಗಿದ್ದು, ತೆಲುಗು ಮಿಶ್ರಿತ ಕನ್ನಡದಲ್ಲಿ ತಮ್ಮ ಸಂಭಾಷಣೆ ಇರಲಿದೆ ಎಂದು ತಿಳಿಸಿದ್ದಾರೆ. ಎ.ಜೆ. ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಸುನೀಲ್ ಅವರೊಂದಿಗೆ ನಟಿಸುತ್ತಿರುವುದಕ್ಕೂ ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಕಾಂಬಿನೇಶನ್ ಮುಂದುವರಿಸಿ ಮುಂದೆ ‘ಮೈಲಾರಿ 2’ ಚಿತ್ರವನ್ನೂ ಆರ್. ಚಂದ್ರು ಅವರೊಂದಿಗೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ‘ಓಂ’ ಚಿತ್ರವನ್ನು ಹಲವು ಬಾರಿ ವೀಕ್ಷಿಸಿರುವುದಾಗಿ ಹೇಳಿದ ಸುನೀಲ್, ಶಿವರಾಜಕುಮಾರ್ ಅವರೊಂದಿಗೆ ಅಭಿನಯಿಸುತ್ತಿರುವುದು ಸಂತಸ ತಂದಿದೆ ಹಾಗೂ ಚಿತ್ರದ ಭಾವನಾತ್ಮಕ ಅಂಶ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.