Cinema News

ಪ್ರಿಯಾಂಕ ಉಪೇಂದ್ರ 50ನೇ ಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಟ್ರೇಲರ್ ಅನಾವರಣ

Published

on

ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ಟ್ರೇಲರ್ ಬಿಡುಗಡೆಯು ಬೆಂಗಳೂರಿನ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ನೆರವೇರಿತು. ಇವೆಂಟ್ ಲಿಂಕ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಗುತ್ತ ಮುನಿಪ್ರಸನ್ನ, ಜಿ. ಮುನಿ ವೆಂಕಟ್‌ಚರಣ್ ಹಾಗೂ ಪುರುಷೋತ್ತಮ್ ಬಿ. ಕೊಯ್ಯೂರು ನಿರ್ಮಿಸಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಘು ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಆರಂಭದಿಂದಲೇ ಕುತೂಹಲ ಮೂಡಿಸಿದೆ.

 

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ತ್ರಿವಿಕ್ರಮ ರಘು, ರೈತನ ಮಗನಾಗಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿರುವ ಸಂತಸ ಹಂಚಿಕೊಂಡರು. ಹಣ ಮತ್ತು ಅಧಿಕಾರಕ್ಕಿಂತ ಬುದ್ಧಿಶಕ್ತಿಯೇ ಮನುಷ್ಯನ ನಿಜವಾದ ಸಾಮ್ರಾಜ್ಯ ಕಟ್ಟುತ್ತದೆ ಎಂಬ ಸಂದೇಶ ಚಿತ್ರದ ಕೇಂದ್ರಬಿಂದುವಾಗಿದೆ ಎಂದರು. ಇದೇ ಆಲೋಚನೆಯಿಂದ ‘ಡಿಟೆಕ್ಟಿವ್ ತೀಕ್ಷ್ಣ’ ಕಥೆ ರೂಪುಗೊಂಡಿದ್ದು, ಪ್ರಿಯಾಂಕ ಉಪೇಂದ್ರ ಕಥೆ ಕೇಳಿದ ಕೂಡಲೇ ಬೆಂಬಲ ನೀಡಿದರು. ಶೀರ್ಷಿಕೆಯನ್ನು ಉಪೇಂದ್ರ ಅವರ ಸಲಹೆಯಂತೆ ಅಂತಿಮಗೊಳಿಸಲಾಗಿದ್ದು, ಮೂರು ತಲೆಮಾರುಗಳನ್ನು ಒಳಗೊಂಡ ಕಥೆಗೆ ತಕ್ಕಂತೆ ವಿಶೇಷ ಸೆಟ್‌ಗಳನ್ನು ನಿರ್ಮಿಸಿದ್ದರಿಂದ ಚಿತ್ರದ ನಿರ್ಮಾಣಕ್ಕೆ ಸಮಯ ಹಿಡಿಯಿತು ಎಂದು ವಿವರಿಸಿದರು. ಸೆನ್ಸಾರ್ ಮಂಡಳಿಯೂ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

 

 

 

 

 

 

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ತಮ್ಮ ಸಿನಿ ಪಯಣದಲ್ಲಿ ಇಂತಹ ಬಲಿಷ್ಠ ಕಥೆ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದರು. ದೈಹಿಕ ಸಾಮರ್ಥ್ಯಕ್ಕಿಂತ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಶೇಷವಾಗಿ ಮಹಿಳೆಯರು ಹಾಗೂ ಯುವಜನತೆಗೆ ಈ ಪಾತ್ರ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕ್ಯಾಮೆರಾ, ಕಲಾ ನಿರ್ದೇಶನ ಮತ್ತು ಸಂಗೀತ ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದು, ಪ್ರೇಕ್ಷಕರಿಗೆ ಹಾಲಿವುಡ್ ಮಟ್ಟದ ಅನುಭವ ನೀಡುವ ಪ್ರಯತ್ನ ಮಾಡಲಾಗಿದೆ ಎಂದರು. ಈ ವರ್ಷ ಮಗನ ಸಿನಿಮಾ ಹಾಗೂ ತಮ್ಮ 50ನೇ ಸಿನಿಮಾ ಬಿಡುಗಡೆಯಾಗುತ್ತಿರುವುದು ದ್ವಿಗುಣ ಸಂತಸ ತಂದಿದೆ ಎಂದೂ ಹೇಳಿದರು.

 

 

 

 

 

 

ಕಾರ್ಯಕ್ರಮದಲ್ಲಿ ಹಿರಿಯ ನಟ ಸಿದ್ಲಿಂಗು ಶ್ರೀಧರ್, ಅರುಣ ಬಾಲರಾಜ್, ವಿನ್ಸಿನ್ ಡಯಾಸ್, ರೋಬೋ ಗಣೇಶ್, ಶಶಿಧರ್, ಸಂಕಲನಕಾರ ಶ್ರೀಧರ್ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ವರ್ಗ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪದಪಲ್ಲಿ ರೋಹಿತ್ ಸಂಗೀತ, ಮನು ದಾಸಪ್ಪ ಛಾಯಾಗ್ರಹಣ ಚಿತ್ರಕ್ಕಿದ್ದು, ಸುಗೂರು ಕುಮಾರ್ ವಿತರಣೆ ಮೂಲಕ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.

Spread the love

Copyright © 2019 PopcornKannada.com