Cinema News
‘ಹನುಮಾನ್’ ಮಾದರಿಯಲ್ಲಿ ಕನ್ನಡದಲ್ಲೂ ಸಿದ್ಧವಾಯ್ತು ಆಧ್ಯಾತ್ಮಿಕ ಸಿನಿಮಾ ‘ಪ್ರೇಮರೂಪ ಸಾಯಿಪಾದಾನಂದ’
ಆಧ್ಯಾತ್ಮಿಕ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಸಾಯಿಬಾಬಾ ಅವರ ಅನುಯಾಯಿ ಅವಧೂತ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನವನ್ನು ಆಧರಿಸಿದ ‘ಪ್ರೇಮರೂಪ ಸಾಯಿಪಾದಾನಂದ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಾಯಿಬಾಬಾ ಅವರ ತತ್ವಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸ್ವಾಮೀಜಿಯವರ ಬದುಕು ಮತ್ತು ಸಂದೇಶಗಳನ್ನು ಬೆಳ್ಳಿತೆರೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಸಿನಿಮಾ ರೂಪಿಸಲಾಗಿದೆ. ಸ್ವಾಮೀಜಿಯವರ ಶಿಷ್ಯರಾದ ಟಿ. ಕೃಷ್ಣಕುಮಾರ್, ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಚಿತ್ರವನ್ನು ನಿರ್ಮಿಸಿದ್ದಾರೆ.
ಬಿ. ನಿತ್ಯಾನಂದ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ಮೌಳಿ ಅವರು ರಾಧಾಕೃಷ್ಣ ಸ್ವಾಮೀಜಿಯವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್ ರಾಜು ಸಂಗೀತ ಸಂಯೋಜನೆ ಮಾಡಿದ್ದು, ತಮಿಳುನಾಡು, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಹನುಮಾನ್’ ಚಿತ್ರದಂತಹ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾಗಳ ಮಾದರಿಯಲ್ಲಿ ಭಕ್ತಿಭಾವ ಮತ್ತು ಜೀವನಮೌಲ್ಯಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವಾಗಿ ಈ ಚಿತ್ರ ಗಮನ ಸೆಳೆಯುತ್ತಿದೆ.
ಚಿತ್ರದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂಸದ ಡಾ. ಸಿ.ಎನ್. ಮಂಜುನಾಥ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕರ್ನಾಟಕದಲ್ಲಿ ಸಾಯಿಬಾಬಾ ಅವರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಸಂದೇಶಗಳನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು. ಸಾಯಿಬಾಬಾ ಅವರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸ್ವಾಮೀಜಿಯವರ ಕೊಡುಗೆ ಮಹತ್ವದ್ದಾಗಿದೆ. ಅವರ ಜೀವನದಿಂದ ಕಲಿಯಬೇಕಾದ ಹಲವು ವಿಚಾರಗಳಿದ್ದು, ಈ ಸಿನಿಮಾ ಅವುಗಳನ್ನು ಜನರಿಗೆ ಪರಿಚಯಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಾಮೀಜಿಯವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ನಿರ್ಮಾಪಕ ಟಿ. ಕೃಷ್ಣಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಶ್ರೀಚಂದ್ ರಾಜ್ ಪಾಲ್, ಕನ್ನಡ ಸಾಯಿ ಸಚ್ಚರಿತೆಯ ಬರಹಗಾರ ಶ್ರೀ ಅನಂತ ರಾಮು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಧ್ಯಾತ್ಮಿಕತೆ, ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಉದ್ದೇಶ ಹೊಂದಿರುವ ‘ಪ್ರೇಮರೂಪ ಸಾಯಿಪಾದಾನಂದ’ ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದು, ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಮತ್ತು ಸಂದೇಶಗಳನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿರೀಕ್ಷೆ ಮೂಡಿಸಿದೆ